ಚಾರಣಿಗರಿಗೆ ಸಿಹಿಸುದ್ದಿ: ಜೂನ್ 1ರಿಂದ ಈ ಎಲ್ಲಾ ಟ್ರೆಕ್ಕಿಂಗ್ ಗಳಿಗೆ ಗ್ರೀನ್ ಸಿಗ್ನಲ್

ಬೆಳ್ತಂಗಡಿ: ತಾಲೂಕಿನ ಪ್ರಕೃತಿ ಪ್ರಿಯರು ಮತ್ತು ಚಾರಣಿಗರಿಗೆ ಸಂತಸದ ಸುದ್ದಿ ಸಿಕ್ಕಿದೆ. ಮಳೆಗಾಲ ಆರಂಭದ ಹೊತ್ತಿಗೆ ಪಶ್ಚಿಮ ಘಟ್ಟದ ಹಸಿರು ಮರುಕಳಿಸಿದ್ದು, ಪ್ರಮುಖ ಚಾರಣ ಸ್ಥಳಗಳು ಹಾಗೂ ಜಲಪಾತಗಳು ಮತ್ತೆ ಪ್ರವಾಸಿಗರನ್ನು ಆಕರ್ಷಿಸಲು ಸಜ್ಜಾಗಿವೆ.

ಜೂನ್ 1ರಿಂದ ನೇತ್ರಾವತಿ ಪೀಕ್, ಬಂಡಾಜೆ ಫಾಲ್ಸ್, ಗಡಾಯಿಕಲ್ಲು ಸೇರಿದಂತೆ ಹಲವು ಪ್ರವಾಸಿ ತಾಣಗಳು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುತ್ತಿದೆ. ಕಳೆದ ಜನವರಿಯಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಕಾಡಿಚ್ಚಿನ ಭೀತಿ ಮತ್ತು ಅರಣ್ಯ ಸಂರಕ್ಷಣೆ ದೃಷ್ಟಿಯಿಂದ ಈ ಪ್ರದೇಶಗಳಿಗೆ ಪ್ರವೇಶ ನಿಷೇಧ ಹೇರಿತ್ತು.

ಮಲವಂತಿಗೆ ಗ್ರಾಮವು ತಾಲೂಕಿನ ಅತ್ಯಂತ ಆಕರ್ಷಕ ಪ್ರವಾಸಿ ತಾಣಗಳನ್ನು ಒಳಗೊಂಡಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನ Kudremukh National Park ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶಗಳಿಗೆ ವರ್ಷಂಪ್ರತಿ ಸಾವಿರಾರು ಚಾರಣಿಗರು ಭೇಟಿ ನೀಡುತ್ತಾರೆ.

ಪ್ರವಾಸಿಗರು ನೇತ್ರಾವತಿ ಪೀಕ್ Netravati Peak ಮತ್ತು ಬಂಡಾಜೆ ಜಲಪಾತ Bandaje Falls ಪ್ರದೇಶಗಳಿಗೆ ಭೇಟಿ ನೀಡಲು ಆನ್‌ಲೈನ್ ನೋಂದಣಿ ಕಡ್ಡಾಯವಾಗಿದೆ. ಅರಣ್ಯ ವಿಹಾರ್ ವೆಬ್‌ಸೈಟ್ ಮೂಲಕ ಮುಂಗಡ ಬುಕ್ಕಿಂಗ್ ಮಾಡಬೇಕು. ಆದರೆ ಗಡಾಯಿಕಲ್ಲು Gadayikallu ಮತ್ತು ಕಡಮಗುಂಡಿ Kadamagundi Falls ಪ್ರದೇಶಗಳಿಗೆ ಆಫ್‌ಲೈನ್ ವ್ಯವಸ್ಥೆ ಮುಂದುವರಿಯಲಿದೆ.

ಪ್ರಮುಖ ಚಾರಣ ತಾಣವಾದ ಗಡಾಯಿಕಲ್ಲು Gadayikallu ಸಮುದ್ರಮಟ್ಟದಿಂದ ಸುಮಾರು 1,700 ಅಡಿ ಎತ್ತರದಲ್ಲಿದ್ದು, ಸಾಹಸಪ್ರಿಯರ ಮೆಚ್ಚಿನ ತಾಣವಾಗಿದೆ. ಆದರೆ ಮಳೆ ಹೆಚ್ಚಾದರೆ ಕಲ್ಲುಗಳು ಜಾರುವ ಅಪಾಯ ಇರುವುದರಿಂದ, ಮಳೆಗಾಲದಲ್ಲಿ ಕೆಲ ಸಂದರ್ಭಗಳಲ್ಲಿ ಪ್ರವೇಶ ನಿರ್ಬಂಧ ಹೇರಬಹುದಾಗಿದೆ.

ಇದೇ ವೇಳೆ ಕಡಮಗುಂಡಿ Kadamagundi Falls ಮತ್ತು ಬೊಳ್ಳೆ ಫಾಲ್ಸ್ Bolle Falls ಈಗಾಗಲೇ ಸಾರ್ವಜನಿಕರ ವೀಕ್ಷಣೆಗೆ ತೆರೆದಿವೆ. ಖಾಸಗಿ ಪ್ರದೇಶದಲ್ಲಿರುವ ಎರ್ಮಾಯಿ Ermayi Falls ಜಲಪಾತಕ್ಕೆ ಯಾವುದೇ ನಿರ್ಬಂಧ ಇಲ್ಲ.

ಈ ಬಾರಿ ಬೇಸಿಗೆಯಲ್ಲಿಯೇ ಸುರಿದ ಮಳೆಯಿಂದ ಅರಣ್ಯ ಪ್ರದೇಶಗಳು ಹಸಿರಿನಿಂದ ಕಂಗೊಳಿಸುತ್ತಿದ್ದು, ಹಳ್ಳ-ತೊರೆಗಳಲ್ಲಿ ನೀರಿನ ಹರಿವು ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಮಳೆಗಾಲ ಮತ್ತಷ್ಟು ಚುರುಕುಗೊಳ್ಳಲಿದ್ದು, ಜಲಪಾತಗಳ ಸೌಂದರ್ಯ ಇನ್ನಷ್ಟು ಮನಮೋಹಕವಾಗಲಿದೆ.