ಕುಂದಾಪುರ : ‘ಸೇಫ್ ಕುಂದಾಪುರ ಪ್ರಾಜೆಕ್ಟ್’ ಮೂಲಕ ಕುಂದಾಪುರ ಆಸು-ಪಾಸಿನ ಸಿಸಿ ಟಿವಿ ದೃಶ್ಯಾವಳಿಗಳ ಕಣ್ಗಾವಲು ವ್ಯವಸ್ಥೆ ಸಂಪೂರ್ಣವಾಗಿ ಪೊಲೀಸ್‌ಇಲಾಖೆಯ ಹಿಡಿತದಲ್ಲಿಯೇ ನಡೆಯಲಿದೆ. ಪೊಲೀಸ್ ಇಲಾಖೆಗೆ ಸಿಸಿ ಟಿವಿ ದೃಶ್ಯಾವಳಿಗಳು ತನಿಖೆಯ ಹಂತದಲ್ಲಿ ಅತ್ಯಂತ ಉಪಯೋಗಕ್ಕೆ ಬರುವುದರಿಂದ ಸಾರ್ವಜನಿಕರಿಗೆ ಅಗತ್ಯ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಲು ಇಲಾಖೆಯಿಂದ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಟಿ ಜೇಮ್ಸ್‌ಹೇಳಿದರು.
ಇಲ್ಲಿನ ಅಂಕದಕಟ್ಟೆಯ ಕೆಎಸ್‌ಪಿ ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ವತಿಯಿಂದ ಅನುಷ್ಠಾನಗೊಳಿಸಲಾದ ‘ಸೇಫ್‌ಕುಂದಾಪುರ ಪ್ರಾಜೆಕ್ಟ್’ ಉದ್ಘಾಟಿಸಿ ಅವರು ಮಾತನಾಡಿದರು.
ಅಪರಾಧ ಘಟನೆಗಳು ನಡೆದ ಸಂದರ್ಭದಲ್ಲಿ ನಿಜಾಂಶಗಳನ್ನು ತಿಳಿದುಕೊಳ್ಳಲು ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳು ಅತ್ಯಂತ ಉಪಯುಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರಿನಲ್ಲಿ ಸುಳ್ಳು ಮಾಹಿತಿ ನೀಡಲು ಸಾಧ್ಯವಾಗೋದಿಲ್ಲ. ವಾಹನಗಳ ಅಪಘಾತ ಮಾಡಿ ಪರಾರಿಯಾಗುವ ವಾಹನಗಳ ಗುರುತು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಮುದ್ರಿತ ದೃಶ್ಯಾವಳಿಗಳ ಬದಲು ನೇರ ದೃಶ್ಯಾವಳಿಗಳ ವೀಕ್ಷಣೆಯಿಂದ ಮುಂದಾಗುವ ಸಂಭಾವ್ಯ ಅಪರಾಧ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕುಂದಾಪುರ ಉಪವಿಭಾಗದ ಸಹಾಯಕ ಪೊಲೀಸ್‌ಅಧೀಕ್ಷಕ ಹರಿರಾಂ ಶಂಕರ್, ಪೊಲೀಸ್‌ಇಲಾಖೆಯ ಕಾರ್ಯದಲ್ಲಿ ಸಾರ್ವಜನಿಕರು ಸಹಕಾರ ನೀಡುವ ಮನೋಭಾವ ಕುಂದಾಪುರ ಪರಿಸರದ ಜನರಿಗೆ ಇರುವುದರಿಂದ ಅತ್ಯಂತ ವಿಶಿಷ್ಠವಾದ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಅಪರಾತ್ರಿಯಲ್ಲಿ ನಡೆಯುವ ಕಳ್ಳತನಗಳ ಮಾಹಿತಿ ದೊರಕುವುದರಿಂದ ಕೃತ್ಯಗಳು ನಡೆಯದಂತೆ ತಡೆಯಲು ಸಾಧ್ಯವಾಗುತ್ತದೆ. ಸಿಸಿ ಕ್ಯಾಮರಾ ಅಳವಡಿಸುವಾಗ ಅಗತ್ಯ ಸ್ಥಳಗಳಲ್ಲಿ ಹಾಗೂ ಬೆಳಕಿನ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ನೀಡುವ ಪ್ರಯತ್ನ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ ಅವರು, ಇಂದಿನ ಮಹತ್ವದ ವಿಷಯಗಳಲ್ಲಿ ಭದ್ರತೆ ಅಗ್ರಗಣ್ಯವಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಇದನ್ನು ಆದ್ಯತೆಯಾಗಿ ಪರಿಗಣಿಸಬೇಕು. ಕಾನೂನು ಉಲ್ಲಂಘನೆ ಮಾಡುವವರನ್ನು ಹತ್ತಿಕ್ಕಲು ಇದೊಂದು ವಿನೂತನ ವ್ಯವಸ್ಥೆಯಾಗಿದೆ ಎಂದರು.
ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್‌ಮಂಜಪ್ಪ ಡಿ.ಆರ್, ಕೋಟೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉದಯ್ , ಅನಂತಾ ಹರಿರಾಂ ಶಂಕರ್, ಸೈನ್ ಇನ್ ಸೆಕ್ಯುರಿಟಿಯ ಕೃಷ್ಣ ಇದ್ದರು. ಪತ್ರಕರ್ತ ವಸಂತ ಗಿಳಿಯಾರ್ ನಿರೂಪಿಸಿದರು.