ವೃದ್ದೆಯೊಬ್ಬರಿಗೆ ಡಿಜಿಟೆಲ್ ಅರೆಸ್ಟ್ ಮಾಡಿ 4 ಕೋಟಿ ದೋಚಿದ ಸೈಬರ್ ಕಳ್ಳರು, ರಾಜ್ಯದಲ್ಲೇ ಇದು ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ

ಬೆಂಗಳೂರು: ಮನಿ ಲಾಂಡರಿಂಗ್ ಹೆಸರಿನಲ್ಲಿ “ಡಿಜಿಟಲ್ ಅರೆಸ್ಟ್” ಮಾಡಿ ಸೈಬರ್ ಖದೀಮರು ವೃದ್ಧೆಯೊಬ್ಬರಿಂದ ಬರೋಬ್ಬರಿ 4 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇದು ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳಲ್ಲಿ ಒಂದಾಗಿದೆ.

ಶಿವಾಜಿನಗರ ನಿವಾಸಿ ಲಕ್ಷ್ಮೀ ರಾಮಮೂರ್ತಿ ಎಂಬ ವೃದ್ಧೆಯೇ ವಂಚನೆಗೆ ಒಳಗಾದವರು. ಅವರು ಪ್ರಾಪರ್ಟಿ ಮಾರಾಟದಿಂದ ಪಡೆದಿದ್ದ ಕೋಟ್ಯಂತರ ರೂಪಾಯಿ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇಟ್ಟುಕೊಂಡಿದ್ದರು. ಈ ಬ್ಯಾಂಕ್ ವ್ಯವಹಾರಗಳ ಮಾಹಿತಿ ತಿಳಿದುಕೊಂಡ ಸೈಬರ್ ವಂಚಕರು ಕಳೆದ ಜನವರಿಯಿಂದ ಮೇ ತಿಂಗಳವರೆಗೆ ನಿರಂತರವಾಗಿ ಬೆದರಿಕೆ ಹಾಕಿ “ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಲುಕಿದ್ದೀರಿ” ಎಂದು ನಂಬಿಸಿ ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ.

ವಂಚಕರು ವಿವಿಧ ಹಂತಗಳಲ್ಲಿ ಹಣ ವರ್ಗಾವಣೆ ಮಾಡಿಸಿಕೊಂಡು ಸುಮಾರು 4 ಕೋಟಿ ರೂಪಾಯಿ ದೋಚಿದ್ದಾರೆ ಎನ್ನಲಾಗಿದೆ. ಬಳಿಕ ಮತ್ತೆ ಹಣಕ್ಕಾಗಿ ಒತ್ತಡ ಹೇರಿದ ಆರೋಪಿಗಳು, ವೃದ್ಧೆಯನ್ನು ಮನೆಯಲ್ಲಿದ್ದ ಚಿನ್ನಾಭರಣ ಅಡವಿಡಲು ಪ್ರೇರೇಪಿಸಿದ್ದರು.

ಚಿನ್ನಾಭರಣದೊಂದಿಗೆ ಬ್ಯಾಂಕ್‌ಗೆ ಬಂದಿದ್ದ ವೃದ್ಧೆಯ ವರ್ತನೆ ಅನುಮಾನಾಸ್ಪದವಾಗಿ ಕಂಡ ಹಿನ್ನೆಲೆ ಬ್ಯಾಂಕ್ ವ್ಯವಸ್ಥಾಪಕರು ಎಚ್ಚೆತ್ತುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬ್ಯಾಂಕ್‌ಗೆ ಭೇಟಿ ನೀಡಿದ ಸಿಸಿಬಿ ಸೈಬರ್ ಕ್ರೈಮ್ ಪೊಲೀಸರು ವೃದ್ಧೆಯನ್ನು ವಿಚಾರಿಸಿದಾಗ ಡಿಜಿಟಲ್ ಅರೆಸ್ಟ್ ವಂಚನೆಯ ಸಂಗತಿ ಬಹಿರಂಗವಾಗಿದೆ.

ವೃದ್ಧೆಯಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂಬೈ, ಅಲಹಾಬಾದ್ ಹಾಗೂ ದೆಹಲಿ ಮೂಲದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ವೇಳೆ ವಂಚಕರು ಹಣವನ್ನು 22 ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ.

ಇದಲ್ಲದೆ, ಆರೋಪಿಗಳ ಬ್ಯಾಂಕ್ ಖಾತೆಗಳಲ್ಲಿ ಇದ್ದ ಸುಮಾರು 60 ಲಕ್ಷ ರೂಪಾಯಿ ಹಣವನ್ನು ಸಿಸಿಬಿ ಸೈಬರ್ ಕ್ರೈಮ್ ಪೊಲೀಸರು ಸೀಜ್ ಮಾಡಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.