ಎಬೋಲಾ ವೈರಸ್ ಅಲರ್ಟ್ : ಆಫ್ರಿಕಾ, ಉಗಾಂಡಾ, ಸುಡಾನ್ ದೇಶಗಳಿಗೆ ಸದ್ಯ ಪಯಣ ಬೆಳೆಸಬೇಡಿ ಎಂದ ಕೇಂದ್ರ ಸರ್ಕಾರ

ನವದೆಹಲಿ: ಆಫ್ರಿಕಾದ ಕೆಲವು ದೇಶಗಳಲ್ಲಿ ಮಾರಕ ಎಬೋಲಾ ವೈರಸ್ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆ, ಕೇಂದ್ರ ಆರೋಗ್ಯ ಸಚಿವಾಲಯ ಭಾರತೀಯ ನಾಗರಿಕರಿಗೆ ಕಟ್ಟುನಿಟ್ಟಿನ ಪ್ರಯಾಣ ಮಾರ್ಗಸೂಚಿ ಪ್ರಕಟಿಸಿದೆ. Democratic Republic of the Congo, ಉಗಾಂಡಾ ಹಾಗೂ ಸೌತ್ ಸುಡಾನ್ ದೇಶಗಳಿಗೆ ಅತ್ಯಗತ್ಯವಿಲ್ಲದಿದ್ದರೆ ಪ್ರಯಾಣ ಕೈಗೊಳ್ಳಬಾರದು ಎಂದು ಸೂಚಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ World Health Organization ಈ ಪ್ರದೇಶಗಳಲ್ಲಿನ ಎಬೋಲಾ ಪರಿಸ್ಥಿತಿಯನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದ ಬೆನ್ನಲ್ಲೇ ಭಾರತ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕಠಿಣಗೊಳಿಸಿದೆ. ಸದ್ಯ ಹರಡುತ್ತಿರುವ ‘ಬುಂಡಿಬುಗ್ಯೋ’ ತಳಿಯ Ebola ವೈರಸ್‌ಗೆ ನಿರ್ದಿಷ್ಟ ಲಸಿಕೆ ಲಭ್ಯವಿಲ್ಲ ಎಂಬುದು ಆರೋಗ್ಯ ತಜ್ಞರ ಆತಂಕಕ್ಕೆ ಕಾರಣವಾಗಿದೆ.

ಎಬೋಲಾ ಪೀಡಿತ ರಾಷ್ಟ್ರಗಳಿಂದ ಭಾರತಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕರಿಗೆ ದೇಶದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಆರೋಗ್ಯ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದಿರುವ ಶಂಕೆ ಇದ್ದಲ್ಲಿ, ಪ್ರಯಾಣಿಕರು ಇಮಿಗ್ರೇಷನ್ ಕ್ಲಿಯರೆನ್ಸ್‌ಗೂ ಮುನ್ನ ವಿಮಾನ ನಿಲ್ದಾಣದ ಹೆಲ್ತ್ ಡೆಸ್ಕ್‌ಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.

ಬಾಧಿತ ದೇಶಗಳಿಂದ ಮರಳಿದ 21 ದಿನಗಳ ಒಳಗೆ ಜ್ವರ, ತಲೆನೋವು, ವಾಂತಿ, ಭೇದಿ ಅಥವಾ ಅಸಹಜ ರಕ್ತಸ್ರಾವದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ತಮ್ಮ ಪ್ರವಾಸದ ವಿವರಗಳನ್ನು ತಿಳಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಭಾರತದಲ್ಲಿ ಇದುವರೆಗೆ ಈ ತಳಿಯ ಎಬೋಲಾ ಸೋಂಕಿನ ಯಾವುದೇ ಪ್ರಕರಣ ವರದಿಯಾಗಿಲ್ಲ. ಆದಾಗ್ಯೂ ಮುನ್ನೆಚ್ಚರಿಕೆಯ ಕ್ರಮವಾಗಿ ದೆಹಲಿಯಲ್ಲಿ ನಡೆಯಬೇಕಿದ್ದ ಭಾರತ–ಆಫ್ರಿಕಾ ಶೃಂಗಸಭೆಯನ್ನು ಮುಂದೂಡಲಾಗಿದೆ. ದೇಶದ ಎಲ್ಲಾ ರಾಜ್ಯಗಳಿಗೆ ಕ್ವಾರಂಟೈನ್ ಹಾಗೂ ಐಸೊಲೇಶನ್ ವಾರ್ಡ್‌ಗಳನ್ನು ಸಜ್ಜುಗೊಳಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

ಆರೋಗ್ಯ ಸಚಿವಾಲಯದ ಪ್ರಕಾರ, ಡಿಆರ್‌ಸಿಯ ಮೂರು ಪ್ರಾಂತ್ಯಗಳಲ್ಲಿ ನೂರಾರು ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಅನೇಕ ಸಾವುಗಳು ಸಂಭವಿಸಿವೆ. ಸೋಂಕು ಗಾಳಿಯ ಮೂಲಕ ಹರಡುವುದಿಲ್ಲವಾದರೂ, ಸೋಂಕಿತರ ದೈಹಿಕ ದ್ರವಗಳ ಸಂಪರ್ಕದಿಂದ ಹರಡುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಇಲಾಖೆ ತಿಳಿಸಿದೆ.