ಆರೋಪಿಯ ಕೃತ್ಯ ಮೊಬೈಲ್’ನಲ್ಲಿ ಸೆರೆ.!
ಉಡುಪಿ: ನಗರದ ಕರಾವಳಿ ಬೈಪಾಸ್ ನಲ್ಲಿ ಬೇಕರಿ ಮಾಲೀಕರೊಬ್ಬರಿಗೆ ಚಾಕು ತೋರಿಸಿ ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ.
ಪೂಜಾ ಬೇಕರಿಯ ಮಾಲೀಕ ಮುರಳೀಧರ ಹಲ್ಲೆಗೆ ಒಳಗಾದವರಾಗಿದ್ದು, ಪಕ್ಕದಲ್ಲಿರುವ ಕೃಷ್ಣ ಬೇಕರಿಯ ಮಾಲೀಕ ಅಶೋಕ್ ವಿರುದ್ಧ ಆರೋಪ ಕೇಳಿಬಂದಿದೆ.
ಮುರಳೀಧರ ಅವರು ಕಳೆದ ಸುಮಾರು 20 ವರ್ಷಗಳಿಂದ ಕರಾವಳಿ ಬೈಪಾಸ್ ಬಳಿ ಬೇಕರಿ ಉದ್ಯಮ ನಡೆಸುತ್ತಿದ್ದು, ಅಶೋಕ್ ಅವರು ಸುಮಾರು ಒಂದು ವರ್ಷದ ಹಿಂದೆ ಅಲ್ಲಿ ಹೊಸದಾಗಿ ಬೇಕರಿ ಆರಂಭಿಸಿದ್ದರೆಂದು ತಿಳಿದುಬಂದಿದೆ.
ಶನಿವಾರ ಸಂಜೆ ಅಶೋಕ್ ಏಕಾಏಕಿ ಮುರಳೀಧರ ಅವರ ಅಂಗಡಿ ಮುಂದೆ ಬಂದು ಗಲಾಟೆ ಆರಂಭಿಸಿ, “ನನ್ನ ವ್ಯಾಪಾರಕ್ಕೆ ತೊಂದರೆ ಮಾಡುತ್ತಿದ್ದೀಯ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಈ ವೇಳೆ “ನಿನ್ನ ವ್ಯಾಪಾರಕ್ಕೆ ನಾನು ಅಡ್ಡಿಯಾಗಿಲ್ಲ” ಎಂದು ಮುರಳೀಧರ ಸಮಾಧಾನಪಡಿಸಲು ಯತ್ನಿಸಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಅಶೋಕ್ ಅಂಗಡಿಯ ಮುಂಭಾಗದಲ್ಲಿದ್ದ ಸಾಮಾನುಗಳನ್ನು ಎಸೆದು ಹಾನಿಗೊಳಪಡಿಸಿದ್ದಲ್ಲದೆ, ಅಂಗಡಿ ಒಳಗೆ ನುಗ್ಗಿ ಮುರಳೀಧರ ಅವರ ಕಾಲರ್ ಹಿಡಿದು ಚಾಕು ತೋರಿಸಿ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಆರೋಪಿಯ ಕೃತ್ಯ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಯೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ.

















