ನಕಲಿ ಬಿಕಿನಿ ಫೋಟೋ ವೈರಲ್‌: “ಅದು ನನ್ನ ಫೋಟೋ ಅಲ್ಲ” ಸ್ಪಷ್ಟನೆ ನೀಡಿದ ರುಕ್ಕಿಣಿ ವಸಂತ್

ಬೆಂಗಳೂರು: ರುಕ್ಮಿಣಿ ವಸಂತ್ Rukmini Vasanth ಅವರ ಹೆಸರಿನಲ್ಲಿ ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ನಕಲಿ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ನಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸ್ವಿಮ್ಮಿಂಗ್ ಪೂಲ್ ಬಳಿ ಮಹಿಳೆಯೊಬ್ಬರು ಕಾಣಿಸಿಕೊಂಡಿರುವ ಕೆಲವು ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಅವು ರುಕ್ಕಿಣಿ ವಸಂತ್ ಅವರದ್ದೇ ಎಂಬ ರೀತಿಯಲ್ಲಿ ಪ್ರಚಾರ ಮಾಡಲಾಗಿತ್ತು.

ಆದರೆ, ಈ ಎಲ್ಲಾ ಫೋಟೋಗಳು ಮತ್ತು ವಿಡಿಯೋಗಳು ಡೀಪ್‌ಫೇಕ್ ಹಾಗೂ ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ನಕಲಿ ಕಂಟೆಂಟ್ ಎಂದು ರುಕ್ಕಿಣಿ ಸ್ಪಷ್ಟಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರತಿಕ್ರಿಯಿಸಿರುವ ಅವರು, “ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ದೃಶ್ಯಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅವೆಲ್ಲವೂ ಸಂಪೂರ್ಣ ಸುಳ್ಳು” ಎಂದು ಹೇಳಿದ್ದಾರೆ.

ಇಂತಹ ತಂತ್ರಜ್ಞಾನ ದುರ್ಬಳಕೆ ಗಂಭೀರ ಸಮಸ್ಯೆಯಾಗಿದ್ದು, ಖಾಸಗಿತನಕ್ಕೆ ಧಕ್ಕೆ ತರುವಂತಿದೆ ಎಂದು ನಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ರುಕ್ಕಿಣಿ ಹಾಗೂ ಅವರ ತಂಡ ನಿರ್ಧರಿಸಿದ್ದು, ಸುಳ್ಳು ಪೋಸ್ಟ್‌ಗಳನ್ನು ಹಂಚಿಕೊಳ್ಳಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.