ಉಡುಪಿ: ಆಳುವ ವರ್ಗದವರು ಸಂವಿಧಾನದ ಆಶಯಗಳನ್ನು ಮರೆಮಾಚುವ ಉದ್ದೇಶದಿಂದ ಅದರ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಅವರು ಕಾನೂನು ಬಗ್ಗೆ ನಮ್ಮ ಜತೆಗೆ ಮಾತನಾಡುತ್ತಾರೆ ಹೊರತು, ಪ್ರತಿಕ್ರಿಯೆ ತೆಗೆದುಕೊಳ್ಳುತ್ತಿಲ್ಲ. ಇದು ದೇಶದ ಸಂವಿಧಾನ ಸಂಕೀರ್ಣ ಆಗಲು ಮುಖ್ಯ ಕಾರಣ ಎಂದು ಮಂಗಳೂರು ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.
ಪಿ.ಎಲ್. ಧರ್ಮ ಹೇಳಿದರು.
ಉಡುಪಿ ವಕೀಲರ ಸಂಘ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ವಕೀಲರ ಸಂಘದ ಸಭಾಂಗಣದಲ್ಲಿ ಮಂಗಳವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನವನ್ನು ಪ್ರತಿಯೊಬ್ಬರು ತಮ್ಮ ತಮ್ಮ ಮೂಗಿನ ನೇರಕ್ಕೆ ನೋಡುವ ಪ್ರಯತ್ನ ಹಾಗೂ ಹೊಸ ಸಂಸ್ಕೃತಿ ಆರಂಭವಾಗಿದೆ. ದೇಶದಲ್ಲಿ ಸಮಸ್ಯೆಗಳು ಇದೆ ಎಂದಾದರೆ ಸಂವಿಧಾನವನ್ನು ಉಳಿಸುವ ಬಹಳ ದೊಡ್ಡ ಜವಾಬ್ದಾರಿ ನಮ್ಮ ಮುಂದೆ. ಈಗ ಅನುಷ್ಠಾನ ಆಗಿರುವ ಅಂಶಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು. ಇದು ಯುವ ವಕೀಲರಿಂದ ಹಾಗೂ ಕಾನೂನು ರಕ್ಷಕರಿಂದ ಆಗಬೇಕು. ಕಾನೂನು ವಿದ್ಯಾಲಯಗಳಿಂದ ಆಗಬೇಕಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಸಿ.ಪಿಂ ಜೋಶಿ ಮಾತನಾಡಿ, ದೇಶದ ಎಲ್ಲ ಆಗು ಹೋಗುಗಳು, ಕಾನೂನುಗಳು ಸಂವಿಧಾನಕ್ಕೆ ಅನುಗುಣವಾಗಿರಬೇಕು. ಸಂವಿಧಾನಕ್ಕೆ ವಿರುದ್ಧವಾಗಿ ಕಾನೂನುಗಳು ಸೃಷ್ಟಿಯಾದಾಗ ಅದನ್ನು ನ್ಯಾಯಾಲಯಗಳು ಒಡೆದು ಹಾಕಿವೆ. ಆಧುನಿಕ ಭಾರತದ ಜೀವಾಳ ಸಂವಿಧಾನ. ಇದರ ಆಶೋತ್ತರಗಳನ್ನು ಅರ್ಥಮಾಡಿಕೊಂಡು ಮುನ್ನಡೆಯುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಭಾರತದ ಸಂವಿಧಾನಕ್ಕೆ 70 ವರ್ಷ ಕಳೆದರೂ ಅದರಲ್ಲಿ ಹೇಳಿರುವ ಅನೇಕ ಸಂಗತಿಗಳು ಇನ್ನೂ ಸಹ ಕಾರ್ಯರೂಪಕ್ಕೆ ಬಂದಿಲ್ಲ. ಕೆಲವು ಸಂಗತಿಗಳು ಅನುಷ್ಠಾನದ ಹಂತದಲ್ಲಿಯೇ ಉಳಿದುಕೊಂಡಿದೆ. ಆದ್ದರಿಂದ ಈ ಬಗ್ಗೆ ಪುನರಾವಲೋಕನ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ವಿವೇಕಾನಂದ ಪಂಡಿತ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ಯಾರಾ ಲೀಗಲ್ ವಾಲೆಂಟರ್ ಪ್ರಶಸ್ತಿ ಪಡೆದ ಸಾಮಾಜಿಕ ಕಾರ್ಯಕರ್ತ ವಿಶುಶೆಟ್ಟಿ ಅಂಬಲಪಾಡಿ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಸ್ವಾಗತಿಸಿದರು. ವಕೀಲ ಅಸದುಲ್ಲಾ ಕಟಪಾಡಿ ಅತಿಥಿಗಳನ್ನು ಪರಿಚಯಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ಲೋಕಾಯುಕ್ತ ವಿಶೇಷ ಅಭಿಯೋಜಕ ವಿಜಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.












