ಭೋಪಾಲ್: ಮಧ್ಯಪ್ರದೇಶದ ರತ್ನಂ ಜಿಲ್ಲೆಯಲ್ಲಿ ತಿರುವನಂತಪುರಂ-ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ರವಿವಾರ(ಮೇ17) ಭಾರಿ ಬೆಂಕಿ ಕಾಣಿಸಿಕೊಂಡಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಬೆಂಕಿ ಅವಘಡ ಸಂಭವಿಸಿದ ಕೋಚ್‌ನಲ್ಲಿ 68 ಪ್ರಯಾಣಿಕರಿದ್ದರು.
ಪಶ್ಚಿಮ ಮಧ್ಯ ರೈಲ್ವೆಯ ಕೋಟಾ ವಿಭಾಗದ ಲುನಿ ರಿಚಾ ಮತ್ತು ವಿಕ್ರಮ್ ಗಢ ಅಲೋಟ್ ನಿಲ್ದಾಣಗಳ ನಡುವೆ ಬೆಳಗಿನ ಜಾವ 5.15 ರ ಸುಮಾರಿಗೆ ರೈಲು ಸಂಖ್ಯೆ 12431 ರ ಬಿ-1 ಕೋಚ್ ಮತ್ತು ಪಕ್ಕದ ಎಸ್‌ಎಲ್‌ಆರ್ (ಸೀಟಿಂಗ್ ಕಮ್ ಲಗೇಜ್) ಕೋಚ್‌ನಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿಯವರೆಗೆ ಯಾವುದೇ ಗಾಯಗಳು ಅಥವಾ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ.
ರೈಲು ನಿಲ್ದಾಣದಿಂದ ದಟ್ಟ ಹೊಗೆ ಮತ್ತು ಜ್ವಾಲೆಗಳು ಹೊರಬರುತ್ತಿರುವುದನ್ನು ಗಮನಿಸಿದ ರೈಲು ಸಿಬಂದಿ ಮೊದಲು ಲೋಕೋ ಪೈಲಟ್‌ಗೆ ಮಾಹಿತಿ ನೀಡಿದರು, ನಂತರ ರೈಲನ್ನು ನಿಲ್ಲಿಸಲಾಗಿದ್ದು ತುರ್ತು ಸ್ಥಳಾಂತರಿಸುವ ಕ್ರಮಗಳನ್ನು ಪ್ರಾರಂಭಿಸಲಾಯಿತು. ಬೆಂಕಿ ಮತ್ತಷ್ಟು ಹರಡದಂತೆ ತಡೆಯಲು ಓವರ್ಹೆಡ್ ವಿದ್ಯುತ್ (OHE) ಪೂರೈಕೆಯನ್ನು ತತ್ ಕ್ಷಣವೇ ಕಡಿತಗೊಳಿಸಿ, ಬೆಂಕಿ ಕಾಣಿಸಿಕೊಂಡಿದ್ದ ಕೋಚ್ ಅನ್ನು ರೈಲಿನಿಂದ ಬೇರ್ಪಡಿಸಲಾಗಿದೆ.

















