ಉಪ್ಪಿನಂಗಡಿಯಲ್ಲಿ ಸರಣಿ ಕಳ್ಳತನ: ವೈದ್ಯರ ಕ್ಲಿನಿಕ್‌ಗಳು, ವಕೀಲರ ಕಚೇರಿ ದೋಚಿದ ಕಳ್ಳರು

ಉಪ್ಪಿನಂಗಡಿ: ಪಟ್ಟಣದ ಹೃದಯ ಭಾಗದಲ್ಲಿರುವ ಮೂರು ವೈದ್ಯರ ಕ್ಲಿನಿಕ್‌ಗಳು ಹಾಗೂ ಒಂದು ನೋಟರಿ ವಕೀಲರ ಕಚೇರಿಗೆ ನುಗ್ಗಿದ ಕಳ್ಳರು ಒಟ್ಟು ₹71,500 ನಗದು ಹಣವನ್ನು ದೋಚಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಖ್ಯಾತ ಮಕ್ಕಳ ತಜ್ಞ ಡಾ. ಎಂ.ಎನ್. ಭಟ್ Dr. M. N. Bhat ಅವರ ಕ್ಲಿನಿಕ್‌ನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕ್ಲಿನಿಕ್‌ನಲ್ಲಿ ಇಡಲಾಗಿದ್ದ ₹55,000 ನಗದು ಹಣವನ್ನು ಕಳವು ಮಾಡಿದ್ದಾರೆ. ಶನಿವಾರ ರಜೆ ದಿನವಾಗಿದ್ದರಿಂದ ಸಂಜೆ ವೇಳೆ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಇದೇ ಪ್ರದೇಶದಲ್ಲಿರುವ ಡಾ. ಗೋವಿಂದ ಪ್ರಸಾದ್ ಕಜೆ Dr. Govinda Prasad Kaje ಅವರ ಕ್ಲಿನಿಕ್‌ನ ಒಂದು ಬೀಗವನ್ನು ಮುರಿದರೂ, ಮತ್ತೊಂದು ಬೀಗ ತೆರೆಯಲು ಸಾಧ್ಯವಾಗದೆ ಕಳ್ಳರು ಹಿಂದಿರುಗಿದ್ದಾರೆ.

ಅದೇ ಕಟ್ಟಡದಲ್ಲಿರುವ ಡಾ. ರಾಜಾರಾಮ್ ಕೆ.ಬಿ Dr. Rajaram K. B. ಅವರ ದಂತ ಚಿಕಿತ್ಸಾಲಯಕ್ಕೆ ನುಗ್ಗಿದ ಕಳ್ಳರು, ಹಣಕ್ಕಾಗಿ ಟೇಬಲ್‌ನ ಡ್ರಾಯರ್ ಅನ್ನು ಮುರಿದು ದಾಖಲೆಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಆದರೆ ಹಣ ಸಿಗದ ಕಾರಣ ಕಳವು ಯತ್ನ ವಿಫಲವಾಗಿದೆ.

ಸಮೀಪದಲ್ಲಿರುವ ಅರವಿಂದ ಭಂಡಾರಿ Aravinda Bhandary ಅವರ ಕಚೇರಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕಚೇರಿಯಲ್ಲಿ ಇಡಲಾಗಿದ್ದ ₹16,500 ನಗದು ಹಣವನ್ನು ದೋಚಿದ್ದಾರೆ.

ಇದಕ್ಕೂ ಮುನ್ನ ಶುಕ್ರವಾರ ಇದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ₹15.80 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದರು. ಅದರ ಬೆನ್ನಲ್ಲೇ ಪಟ್ಟಣದ ಮಧ್ಯಭಾಗದಲ್ಲೇ ನಾಲ್ಕು ಸ್ಥಳಗಳಲ್ಲಿ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮತ್ತು ಕಳವಳಕ್ಕೆ ಕಾರಣವಾಗಿದೆ.