ಉಡುಪಿ: ಕೆಡಿಪಿ ಸಭೆಯಲ್ಲಿ ಶಿಷ್ಟಾಚಾರ ಪಾಲನೆ ಆಗುತ್ತಿಲ್ಲ ,ಕ್ಷೇತ್ರದಲ್ಲಿ ಅಧಿಕಾರಿಗಳ ದರ್ಬಾರ್ – ಬಿಜೆಪಿ ಶಾಸಕರ ಆರೋಪ, ಬಿಸಿ ಬಿಸಿ ಚರ್ಚೆ

ಉಡುಪಿ : ಉಡುಪಿ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಿಷ್ಟಾಚಾರ ಪಾಲನೆ ಆಗುತ್ತಿಲ್ಲ ಎಂದು ಜಿಲ್ಲೆಯ ಬಿಜೆಪಿ ಶಾಸಕರುಗಳು ಆರೋಪಿಸಿದ್ದು ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಬಿಜೆಪಿ ಶಾಸಕರು ತರಾಟೆಗೆ ತೆಗೆದುಕೊಂಡ ಘಟನೆ ಸಭೆಯಲ್ಲಿ ನಡೆಯಿತು.ಕಾರ್ಕಳ ಶಾಸಕ
ಸುನಿಲ್ ಕುಮಾರ್, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರ್ಮೆ ಸುರೇಶ್ ಶೆಟ್ಟಿ ಅವರು ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಕ್ಕು ಪತ್ರ ವಿತರಣೆಯಂತಹ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳಾದ ಶಾಸಕರನ್ನು ಅಧಿಕಾರಿಗಳು ಕಡೆಗಣಿಸುತ್ತಿದ್ದಾರೆ ಎಂದು ಸುನಿಲ್ ಕುಮಾರ್ ಆರೋಪಿಸಿದರು. ತಮ್ಮ ಕ್ಷೇತ್ರದ ಹಕ್ಕುಪತ್ರವನ್ನು ಬೇರೆ ಯಾರೋ ವಿತರಣೆ ಮಾಡುತ್ತಿದ್ದಾರೆ ಎಂದು ಫೋಟೋ ಪ್ರದರ್ಶಿಸಿದರು. ಇದೇ ವೇಳೆ, ರಂಗಾಯಣ ಪ್ರಕಟಿಸಿದ ಪುಸ್ತಕದಲ್ಲಿ ಉಸ್ತುವಾರಿ ಸಚಿವೆ ಮತ್ತು ಸಂಸದರ ಭಾವಚಿತ್ರವನ್ನು ಪ್ರಕಟಿಸದೇ ಶಿಷ್ಟಾಚಾರ ಲೋಪ ಎಸಗಲಾಗಿದೆ ಎಂಬ ವಿಷಯವೂ ಸಭೆಯಲ್ಲಿ ಪ್ರಸ್ತಾಪವಾಯಿತು.
ಅಧಿಕಾರಿಗಳ ನಡೆಗೆ ಅಸಮಾಧಾನಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗರಂ ಆಗಿ, ಕಾರ್ಕಳ ತಹಶೀಲ್ದಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸುವಂತೆ ಸೂಚನೆ ನೀಡಿದರು.