ಇತ್ತೀಚಿನ ದಿನಗಳಲ್ಲಿ ಬಹುತೇಕ ಪ್ರತಿಯೊಂದು ಮನೆಯ ಅಡುಗೆಮನೆಯಲ್ಲಿ ಪ್ರೆಶರ್ ಕುಕರ್ Pressure Cooker ಬಳಸಲಾಗುತ್ತಿದೆ. ಕಡಿಮೆ ಸಮಯದಲ್ಲಿ ಅಡುಗೆ ಸಿದ್ಧವಾಗಲು ಇದು ಸಹಾಯಕವಾದರೂ, ಅಜಾಗರೂಕತೆಯಿಂದ ಬಳಸಿದರೆ ಅಪಾಯಕ್ಕೂ ಕಾರಣವಾಗಬಹುದು. ವಿಶೇಷವಾಗಿ ಕೆಲ ಸಾಮಾನ್ಯ ತಪ್ಪುಗಳು ಕುಕ್ಕರ್ ಸ್ಫೋಟಗೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ರಬ್ಬರ್ ಗ್ಯಾಸ್ಕೆಟ್ ಮತ್ತು ಸುರಕ್ಷತಾ ಕವಾಟ ಪರಿಶೀಲನೆ ಅಗತ್ಯ
ಕುಕ್ಕರ್ ಬಳಸುವ ಮೊದಲು ಅದರ ರಬ್ಬರ್ ಗ್ಯಾಸ್ಕೆಟ್ ಹಾಗೂ ಸುರಕ್ಷತಾ ಕವಾಟ ಸರಿಯಾದ ಸ್ಥಿತಿಯಲ್ಲಿವೆಯೇ ಎಂದು ಪರಿಶೀಲಿಸಬೇಕು. ಇವು ಕುಕ್ಕರ್‌ನೊಳಗಿನ ಒತ್ತಡವನ್ನು ನಿಯಂತ್ರಿಸುವ ಪ್ರಮುಖ ಭಾಗಗಳು. ಗ್ಯಾಸ್ಕೆಟ್ ಸಡಿಲವಾಗಿದ್ದರೆ ಅಥವಾ ಕವಾಟದಲ್ಲಿ ತೊಂದರೆ ಇದ್ದರೆ ಉಗಿ ಸರಿಯಾಗಿ ಹೊರಬರದೇ ಒತ್ತಡ ಹೆಚ್ಚಾಗಿ ಸ್ಫೋಟ ಸಂಭವಿಸುವ ಅಪಾಯವಿದೆ.
ಕಡಿಮೆ ನೀರು ಹಾಕುವುದು ಅಪಾಯಕಾರಿ
ಕೆಲವರು ಆಹಾರ ಬೇಗ ಬೇಯಲಿ ಎಂಬ ಕಾರಣಕ್ಕೆ ಕಡಿಮೆ ನೀರು ಬಳಸುತ್ತಾರೆ. ಆದರೆ ಇದು ದೊಡ್ಡ ತಪ್ಪು. ನೀರು ಕಡಿಮೆಯಾದರೆ ಆಹಾರ ಸುಟ್ಟುಹೋಗುವುದಲ್ಲದೆ ಕುಕ್ಕರ್ ಅತಿಯಾಗಿ ಬಿಸಿಯಾಗುತ್ತದೆ. ಇದರಿಂದ ಸ್ಫೋಟದ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ಆಹಾರಕ್ಕೆ ಬೇಕಾದಷ್ಟು ನೀರನ್ನು ತಪ್ಪದೇ ಸೇರಿಸಬೇಕು.
ಸೀಟಿ (ವಿಜಲ್) ಸ್ವಚ್ಛತೆ ಬಹಳ ಮುಖ್ಯ
ಕುಕ್ಕರ್‌ನ ಸೀಟಿಯಲ್ಲಿ ಆಹಾರ ಕಣಗಳು ಅಥವಾ ಕೊಳಕು ಸಿಲುಕಿಕೊಂಡಿದ್ದರೆ ಉಗಿ ಹೊರಬರುವ ದಾರಿ ಮುಚ್ಚಿಕೊಳ್ಳಬಹುದು. ಇದರಿಂದ ಒಳಗಿನ ಪ್ರೆಶರ್ ಹೆಚ್ಚಾಗಿ ಅಪಾಯ ಉಂಟಾಗಬಹುದು. ಹೀಗಾಗಿ ಸೀಟಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಅಗತ್ಯ. ಅಲ್ಲದೇ ಸೀಟಿ ಬದಲಾದರೂ ಕೂಡಾ ಅಪಾಯಕಾರಿ.
ಕುಕ್ಕರ್ ಅತಿಯಾಗಿ ತುಂಬಿಸಬೇಡಿ
ಕುಕ್ಕರ್ ಸಾಮರ್ಥ್ಯಕ್ಕಿಂತ ಹೆಚ್ಚು ಆಹಾರ ತುಂಬಿಸುವುದೂ ಅಪಾಯಕಾರಿ. ಆಹಾರ ಬೇಯುವಾಗ ಹಿಗ್ಗುವುದರಿಂದ ಉಗಿ ಸಂಚಾರಕ್ಕೆ ಜಾಗ ಕಡಿಮೆಯಾಗುತ್ತದೆ. ಇದರಿಂದ ಒಳಗಿನ ಒತ್ತಡ ಹೆಚ್ಚಾಗಿ ಕುಕ್ಕರ್ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ತಜ್ಞರ ಪ್ರಕಾರ, ಕುಕ್ಕರ್ ಅನ್ನು ಅದರ ಸಾಮರ್ಥ್ಯದ ಮೂರನೇ ಎರಡರಷ್ಟು ಮಾತ್ರ ತುಂಬಿಸುವುದು ಸುರಕ್ಷಿತ.
ಹಳೆಯ ಕುಕ್ಕರ್ ಬಳಕೆ ಬೇಡ
ತುಂಬಾ ಹಳೆಯದಾದ ಅಥವಾ ಹಾನಿಗೊಳಗಾದ ಕುಕ್ಕರ್ ಬಳಸುವುದನ್ನು ತಪ್ಪಿಸಬೇಕು. ಕಾಲಕ್ರಮೇಣ ಕುಕ್ಕರ್‌ನ ಭಾಗಗಳು ದುರ್ಬಲವಾಗುತ್ತವೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಕುಕ್ಕರ್ ಬದಲಾಯಿಸುವುದು ಉತ್ತಮ. ಗುಣಮಟ್ಟದ ಹಾಗೂ ವಿಶ್ವಾಸಾರ್ಹ ಕಂಪನಿಯ ಕುಕ್ಕರ್ ಬಳಸುವುದು ಸುರಕ್ಷತೆಗೆ ಸಹಕಾರಿ.
ಅಡುಗೆ ಮಾಡುವಾಗ ಸಣ್ಣ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ದೊಡ್ಡ ಅಪಾಯಗಳನ್ನು ತಪ್ಪಿಸಬಹುದು. ಕುಕ್ಕರ್ ಬಳಸುವ ಮೊದಲು ಅದರ ಸ್ಥಿತಿಯನ್ನು ಪರಿಶೀಲಿಸುವ ಅಭ್ಯಾಸ ರೂಢಿಸಿಕೊಳ್ಳುವುದು ಅತ್ಯಂತ ಮುಖ್ಯ.

















