ಬಾಳೆಹಣ್ಣಿನ ಸಿಪ್ಪೆ ಮೇಲೆ ಕಾಲಿಟ್ಟರೆ ಜಾರಿ ಬೀಳೋದ್ರ ಹಿಂದಿದೆ ವಿಜ್ಞಾನ! ಅಚ್ಚರಿಯ ಈ ಸಂಗತಿ ನಿಮಗೆ ಗೊತ್ತೇ?

ಬಾಳೆಹಣ್ಣಿನ Banana ಸಿಪ್ಪೆ ಮೇಲೆ ಕಾಲಿಟ್ಟು ಜಾರಿಬೀಳುವ ದೃಶ್ಯಗಳನ್ನು ನಾವು ಸಿನಿಮಾಗಳಲ್ಲಿ ಮಾತ್ರವಲ್ಲ ನಿಜಜೀವನದಲ್ಲೂ ಹಲವಾರು ಬಾರಿ ನೋಡಿದ್ದೇವೆ. ನಿಮ್ಮದೇ ಅನುಭವಕ್ಕೂ ಬಂದಿರಬಹುದು. ಇದರ ಹಿಂದೆ ಒಂದು ಕುತೂಹಲಕರ ವೈಜ್ಞಾನಿಕ ಕಾರಣವಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಬಾಳೆಹಣ್ಣು ಆರೋಗ್ಯಕ್ಕೆ ಅತ್ಯಂತ ಉತ್ತಮ ಹಣ್ಣುಗಳಲ್ಲಿ ಒಂದಾಗಿದೆ. ಇದರಲ್ಲಿ ಪೊಟ್ಯಾಸಿಯಮ್, ವಿಟಮಿನ್ ಬಿ6 ಹಾಗೂ ಫೈಬರ್ ಸಮೃದ್ಧವಾಗಿವೆ. ಆದರೆ ಅದರ ಸಿಪ್ಪೆಯನ್ನು ನಿರ್ಲಕ್ಷ್ಯವಾಗಿ ರಸ್ತೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಬಿಸಾಡಿದರೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಬಗ್ಗೆ Kitasato University ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಮಹತ್ವದ ವಿಚಾರ ಬಹಿರಂಗವಾಗಿದೆ. ಈ ಸಂಶೋಧನೆಗೆ ಅವರಿಗೆ ಪ್ರತಿಷ್ಠಿತ ‘Ig Nobel Prize’ ಪ್ರಶಸ್ತಿಯೂ ಲಭಿಸಿತ್ತು.

ಬಾಳೆಹಣ್ಣಿನ ಸಿಪ್ಪೆ ಹೆಚ್ಚು ಜಾರುವುದೇಕೆ?

ವಿಜ್ಞಾನಿಗಳ ಪ್ರಕಾರ, ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಲ್ಲಿ ‘ಪಾಲಿಸ್ಯಾಕರೈಡ್ ಜೆಲ್’ ಎಂಬ ಜೇಲ್ ಮಾದರಿಯ ಸೂಕ್ಷ್ಮ ಕೋಶಗಳು ಇರುತ್ತವೆ. ಸಿಪ್ಪೆಯ ಮೇಲೆ ಕಾಲಿಟ್ಟಾಗ ಒತ್ತಡದಿಂದ ಈ ಕೋಶಗಳು ಒಡೆದು ಜೆಲ್ ಹೊರಬರುತ್ತದೆ.

ಈ ಜೆಲ್ ಶೂ ಹಾಗೂ ನೆಲದ ಮಧ್ಯೆ ಲೂಬ್ರಿಕಂಟ್‌ನಂತೆ ಕೆಲಸ ಮಾಡುತ್ತದೆ. ಪರಿಣಾಮವಾಗಿ ಇದರಿಂದ ನೆಲದೊಂದಿಗೆ ಇರುವ ಘರ್ಷಣೆ ಬಹಳಷ್ಟು ಕಡಿಮೆಯಾಗುತ್ತದೆ ಕಾಲು ಕ್ಷಣಾರ್ಧದಲ್ಲೇ ಜಾರಿಬಿಡುತ್ತದೆ.

ಮಂಜುಗಡ್ಡೆಗಿಂತಲೂ ಹೆಚ್ಚು ಜಾರುವ ಗುಣ

ಅಧ್ಯಯನದ ಪ್ರಕಾರ, ಬಾಳೆಹಣ್ಣಿನ ಸಿಪ್ಪೆಯ ಘರ್ಷಣಾ ಗುಣಾಂಕ ಕೇವಲ 0.07 ಆಗಿದೆ. ಇದು ಮಂಜುಗಡ್ಡೆಯ ಮೇಲಿನ ಘರ್ಷಣೆಯಿಗಿಂತಲೂ ಕಡಿಮೆ ಎನ್ನಲಾಗಿದೆ. ಇದೇ ಕಾರಣಕ್ಕೆ ದೇಹದ ಸಮತೋಲನ ತಪ್ಪಿ ವ್ಯಕ್ತಿ ಕೆಳಗೆ ಬೀಳುವ ಸಂಭವ ಹೆಚ್ಚಾಗುತ್ತದೆ.

ಇತರ ಹಣ್ಣುಗಳ ಸಿಪ್ಪೆಗಳು ಯಾಕೆ ಅಪಾಯಕಾರಿ ಅಲ್ಲ?

Apple ಹಾಗೂ Orange ಸಿಪ್ಪೆಗಳಲ್ಲಿ ತೇವಾಂಶ ಇದ್ದರೂ, ಬಾಳೆಹಣ್ಣಿನ ಸಿಪ್ಪೆಯಲ್ಲಿರುವಂತಹ ವಿಶೇಷ ಜೆಲ್ ಇರುವುದಿಲ್ಲ. ಹೀಗಾಗಿ ಅವು ಅಷ್ಟಾಗಿ ಜಾರುವ ಗುಣ ಹೊಂದಿರುವುದಿಲ್ಲ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಬಾಳೆಹಣ್ಣಿನ ಸಿಪ್ಪೆಯನ್ನು ಎಲ್ಲೆಂದರಲ್ಲಿ ಎಸೆಯುವುದು ಇತರರ ಜೀವಕ್ಕೆ ಅಪಾಯ ಉಂಟುಮಾಡಬಹುದು. ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅವಘಡಕ್ಕೆ ಕಾರಣವಾಗುವ ಸಾಧ್ಯತೆ ಇರುವುದರಿಂದ, ಸಿಪ್ಪೆಗಳನ್ನು ಸದಾ ಕಸದ ಬುಟ್ಟಿಗೇ ಹಾಕುವುದು ಉತ್ತಮ.