ಉಡುಪಿ: ಕಾಂಗ್ರೆಸ್ ಮುಖಂಡರು ಪ್ರಧಾನಿ ಹೇಳಿಕೆಯನ್ನು ಅರ್ಥೈಸಿಕೊಳ್ಳಲು ಆಗದಷ್ಟು ದುರ್ಬಲರಾಗಿದ್ದಾರೆ- ಸಂಸದ ಕೋಟ

ಉಡುಪಿ: ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿಯವರು ಚಿನ್ನ ಖರೀದಿ ಮಾಡಬೇಡಿ ಎಂದು ಭಾರತೀಯರಲ್ಲಿ ಮನವಿ ಮಾಡಿದ್ದು ಸಾಕಷ್ಟು ಚರ್ಚೆಗೆ ಈಡಾಗಿತ್ತು. ಈ ಸಂಬಂಧ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಧಾನಿ ಮೋದಿಯವರು ಚಿನ್ನ ಖರೀದಿಯನ್ನು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಮಾಡಿ, ಅವಶ್ಯಕತೆಗೆ ತಕ್ಕಂತೆ ಖರೀದಿ ಮಾಡಿ ಎಂದು ಕರೆ ಕೊಟ್ಟಿದ್ದಾರೆ. ಇದಕ್ಕೆ ಬೇರೆ ಕಾರಣ ಇಲ್ಲ. ದೇಶದ ಹಿತದೃಷ್ಟಿಯಿಂದ ಈ ಕರೆಯನ್ನು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.‌

ಅದೇ ರೀತಿ ಎಲೆಕ್ಟ್ರಿಕ್ ವಾಹನಕ್ಕೆ ಪ್ರೋತ್ಸಾಹ ನೀಡುವಂತೆ ಪ್ರಧಾನಿ ಹೇಳಿದ್ದಾರೆ. ಇದರ ಅರ್ಥ ಯುದ್ಧ ಇನ್ನಷ್ಟು ಸಮಯ ಮುಂದುವರಿದರೆ ಕಚ್ಚಾ ತೈಲ ಆಮದಿನಲ್ಲಿ ಸಮಸ್ಯೆ ಉಂಟಾಗಬಹುದು ಎಂಬ ದೃಷ್ಟಿಯಿಂದ. ಅದಕ್ಕೆ ಬೇರೆ ರೀತಿ ಅರ್ಥ ಕೊಡುವ ಅವಶ್ಯಕತೆ ಇಲ್ಲ. ಆದರೆ ಸಿದ್ದರಾಮಯ್ಯ ಅವರು ಮೋದಿ ಕರೆಯನ್ನು ಲೇವಡಿ ಮಾಡುತ್ತಾರೆ.ದೇಶದ

ಹಿತದೃಷ್ಟಿಯಿಂದ ಪ್ರಧಾನಿ ಹೇಳಿದ್ದನ್ನು ಅರ್ಥ ಮಾಡಲು ಆಗದಷ್ಟು ಕಾಂಗ್ರೆಸ್ ಮುಖಂಡರು ದುರ್ಬಲರಾಗುತ್ತಿದ್ದಾರೆ ಅನ್ನೋದು ನೋವಿನ ವಿಷಯ ಎಂದು ಹೇಳಿದ್ದಾರೆ.