ನಾಲ್ಕೈದು ತಿಂಗಳಲ್ಲಿ ಉಡುಪಿ ವಿಜ್ಞಾನ ಕೇಂದ್ರ ಪೂರ್ಣ- ಸಚಿವ ಭೋಸರಾಜು

ಉಡುಪಿ: ಉಡುಪಿ ತಾಲೂಕಿನ ಅಲೆವೂರು ಗ್ರಾಪಂ ವ್ಯಾಪ್ತಿಯ ಪ್ರಗತಿ ನಗರದ ಐದು ಎಕರೆ ಜಾಗದಲ್ಲಿ ನಿರ್ಮಿಸಲಾಗುತ್ತಿರುವ ಉಡುಪಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾಮಗಾರಿಯು ಮುಂದಿನ ನಾಲ್ಕೈದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಹೇಳಿದ್ದಾರೆ.

ಮಣಿಪಾಲ ಪ್ರಗತಿನಗರದಲ್ಲಿ ನಿರ್ಮಾಣವಾಗುತ್ತಿರುವ ಉಡುಪಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಎರಡು ವರ್ಷಗಳ ಹಿಂದೆ ಕೇಂದ್ರ ಮಂಜೂರಾಗಿದ್ದು, ಜಾಗದ ವಿವಾದ ದಿಂದ ಕಾಮಗಾರಿ ವಿಳಂಬವಾಗಿದೆ. ಈ ಕೇಂದ್ರದ ಕಟ್ಟಡಕ್ಕೆ 4ಕೋಟಿ ರೂ. ಹಾಗೂ ಗ್ಯಾಲರಿ ನಿರ್ಮಾಣಕ್ಕೆ 2.5ಕೋಟಿ ರೂ. ಬಿಡುಗಡೆಯಾಗಿದೆ.ಉಡುಪಿ

ಮೂಲಕ ವಿಜ್ಞಾನಿ ಯು.ಆರ್.ರಾವ್ ಹೆಸರಿನಲ್ಲಿ ಈ ಕೇಂದ್ರ ಮಂಜೂರಾಗಿದ್ದು, ಇದರಲ್ಲಿ ಅವರ ಕ್ಷೇತ್ರವಾದ ಏರೋ ಸ್ಪೆಸ್‌ಗೆ ಸಂಬಂಧಿಸಿದ ಗ್ಯಾಲರಿ ಇರುತ್ತದೆ. ಅದೇ ರೀತಿ ಮಿಸ್ಟ್ರಿಸ್ ಆಫ್ ಓಷಿಯನ್, ಫನ್ ಸೈಯನ್ಸ್ ಹಾಗೂ ಔಟ್ ಡೋರ್ ಗ್ಯಾಲರಿಗಳು ಇರುತ್ತವೆ ಎಂದು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಸದಾಶಿವ ಪ್ರಭು ತಿಳಿಸಿದರು.