ಆದಾಯದಲ್ಲಿ ಇತಿಹಾಸ ಸೃಷ್ಟಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ, ಸತತ 15 ವರ್ಷಗಳಿಂದ ರಾಜ್ಯದ ಶ್ರೀಮಂತ ದೇವಸ್ಥಾನದ ಪಟ್ಟ, ಈ ಸಲದ ಆದಾಯವೆಷ್ಟು ಗೊತ್ತಾ?

ಬೆಂಗಳೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ರಾಜ್ಯದ ಮುಜರಾಯಿ ಇಲಾಖೆಯ ಅಡಿಯಲ್ಲಿ ಸತತ 15ನೇ ವರ್ಷವೂ ಅತಿ ಹೆಚ್ಚು ಆದಾಯ ಗಳಿಸಿದ ದೇವಸ್ಥಾನವಾಗಿ ಹೊಸ ದಾಖಲೆ ನಿರ್ಮಿಸಿದೆ. 2025-26ನೇ ಆರ್ಥಿಕ ವರ್ಷದಲ್ಲಿ ದೇವಸ್ಥಾನವು ಬರೋಬ್ಬರಿ 167 ಕೋಟಿ 89 ಲಕ್ಷ 9 ಸಾವಿರ 80 ರೂಪಾಯಿ 77 ಪೈಸೆ ಆದಾಯ ಗಳಿಸಿದ್ದು, ಕಳೆದ ವರ್ಷದಿಗಿಂತ ಸುಮಾರು 12 ಕೋಟಿ ರೂ. ಹೆಚ್ಚಳ ಕಂಡಿದೆ.

2024-25ನೇ ಸಾಲಿನಲ್ಲಿ ದೇವಸ್ಥಾನದ ಒಟ್ಟು ಆದಾಯ ಸುಮಾರು 155 ಕೋಟಿ ರೂ. ಆಗಿದ್ದರೆ, ಈ ಬಾರಿ ತನ್ನದೇ ಹಿಂದಿನ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದೆ. ದೇವಸ್ಥಾನದ ಒಟ್ಟು ವೆಚ್ಚ 85.20 ಕೋಟಿ ರೂ. ಆಗಿದೆ.

ದೇವಸ್ಥಾನದ ಪ್ರಮುಖ ಆದಾಯ ಮೂಲಗಳಲ್ಲಿ ಭಕ್ತರ ಹರಿಕೆ ಸೇವೆಗಳು ಮೊದಲ ಸ್ಥಾನದಲ್ಲಿದ್ದು, ಇದರಿಂದಲೇ 64.08 ಕೋಟಿ ರೂ. ಸಂಗ್ರಹವಾಗಿದೆ. ಹುಂಡಿ ಕಾಣಿಕೆಯಿಂದ 24.69 ಕೋಟಿ ರೂ., ಹೂಡಿಕೆಗಳ ಬಡ್ಡಿಯಿಂದ 49.11 ಕೋಟಿ ರೂ. ದೇವಸ್ಥಾನದ ಖಜಾನೆಗೆ ಹರಿದು ಬಂದಿದೆ.

ಇದರ ಜೊತೆಗೆ ಗುತ್ತಿಗೆಗಳಿಂದ 2.53 ಕೋಟಿ ರೂ., ವಿಶೇಷ ಕಾಣಿಕೆಗಳಿಂದ 5.47 ಕೋಟಿ ರೂ., ಕಟ್ಟಡ ಬಾಡಿಗೆಯಿಂದ 94.46 ಲಕ್ಷ ರೂ. ಹಾಗೂ ಇ-ಹುಂಡಿಯಿಂದ 38 ಲಕ್ಷ ರೂ. ಸಂಗ್ರಹವಾಗಿದೆ.

ಅನ್ನಸಂತರ್ಪಣೆ ನಿಧಿಯಿಂದ 9.14 ಕೋಟಿ ರೂ., ಛತ್ರ ಸಂರಕ್ಷಣಾ ವಂತಿಗೆಯಿಂದ 6.93 ಕೋಟಿ ರೂ., ಇತರೆ ಬಾಬ್ತುಗಳಿಂದ 3.20 ಕೋಟಿ ರೂ. ಮತ್ತು ತೋಟದ ಉತ್ಪನ್ನಗಳಿಂದ 10.50 ಲಕ್ಷ ರೂ. ಆದಾಯ ಲಭಿಸಿದೆ.

2006-07ರಲ್ಲಿ ಕೇವಲ 19.76 ಕೋಟಿ ರೂ. ಆದಾಯ ಹೊಂದಿದ್ದ ದೇವಸ್ಥಾನವು, ಇದೀಗ 167 ಕೋಟಿ ರೂ. ಗಡಿ ದಾಟಿರುವುದು ಭಕ್ತರ ಅಪಾರ ನಂಬಿಕೆ ಮತ್ತು ಕ್ಷೇತ್ರದ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.