ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯ ಗ್ರಾಮೀಣ ಭಾಗಗಳಲ್ಲಿ ಹಲಸಿನ ಮರಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಆದರೆ ಮನಾಟು ಗ್ರಾಮದಲ್ಲಿರುವ ಒಂದು ವಿಶಿಷ್ಟ ಹಲಸಿನ ಮರ ಇದೀಗ ಕುಟುಂಬದ ಆರ್ಥಿಕ ಬಲವಾಗಿದ್ದು, ಗ್ರಾಮಸ್ಥರ ಗಮನ ಸೆಳೆಯುತ್ತಿದೆ. ಸುಮಾರು 50 ವರ್ಷಗಳ ಹಿಂದೆ ಸುರೇಶ್ ಅವರ ಮುತ್ತಜ್ಜ ನೆಟ್ಟ ಈ ಮರ ಇಂದು ಕುಟುಂಬಕ್ಕೆ ಆಶೀರ್ವಾದವಾಗಿ ಪರಿಣಮಿಸಿದೆ. ಜೊತೆಗೆ ಗಿಡಿಗಳನ್ನು ಯಾಕೆ ನೆಡಬೇಕು, ಅದನ್ನು ಮರವಾಗುವ ತನಕ ಯಾಕೆ ಬೆಳೆಸಬೇಕು, ಉಳಿಸಬೇಕು ಎನ್ನುವುದನ್ನು ಈ ಒಂದು ಪ್ರಸಂಗ ಅರ್ಥ ಮಾಡಿಸಿದೆ.
ಬೃಹತ್ ಗಾತ್ರದಲ್ಲಿ ಬೆಳೆದಿರುವ ಈ ಮರದ ದಟ್ಟ ನೆರಳು ಗ್ರಾಮಸ್ಥರಿಗೆ ಬೇಸಿಗೆಯ ಬಿಸಿಲಿನಿಂದ ರಕ್ಷಣೆ ನೀಡುತ್ತಿದೆ. ಮಧ್ಯಾಹ್ನದ ಉರಿ ಬಿಸಿಲಿನಲ್ಲಿಯೂ ಮರದ ಕೆಳಗೆ ತಂಪಾದ ವಾತಾವರಣ ಇರುತ್ತದೆ. ಗ್ರಾಮದ ಜನರು ಮಧ್ಯಾಹ್ನ ವೇಳೆಯಲ್ಲಿ ಮರದ ಕೆಳಗೆ ಸೇರಿ ಹರಟೆ ಹೊಡೆಯುತ್ತಾ ವಿಶ್ರಾಂತಿ ಪಡೆಯುತ್ತಾರೆ.
ಪ್ರತಿದಿನ 25-30 ಕೆಜಿ ಹಲಸಿನ ಹಣ್ಣು, ಒಳ್ಳೆಯ ಆದಾಯ
ಈ ಮರದಲ್ಲಿ ಪ್ರತಿಯೊಂದು ಕೊಂಬೆಯಲ್ಲೂ 10ರಿಂದ 15 ಹಲಸಿನ ಹಣ್ಣುಗಳು ಬೆಳೆಯುತ್ತವೆ. ಮಾರುಕಟ್ಟೆಯಲ್ಲಿ ತಾಜಾ ಹಲಸಿನ ಹಣ್ಣಿಗೆ ಉತ್ತಮ ಬೇಡಿಕೆ ಇರುವ ಹಿನ್ನೆಲೆ, ಸುರೇಶ್ ಪ್ರತಿದಿನ ಸುಮಾರು 25 ರಿಂದ 30 ಕೆಜಿ ಹಣ್ಣುಗಳನ್ನು ಕಿತ್ತು ಮಾರಾಟ ಮಾಡುತ್ತಾರೆ. ಪ್ರತಿ ಕೆಜಿಗೆ ₹50 ದರ ಸಿಗುವುದರಿಂದ ದಿನಕ್ಕೆ ಸುಮಾರು ₹1500 ಆದಾಯ ದೊರೆಯುತ್ತದೆ.
ಹಲಸಿನ ಹಣ್ಣಿಗೆ ಭಾರೀ ಡಿಮ್ಯಾಂಡ್:
ಈ ಮರದ ಹಲಸಿನ ಹಣ್ಣುಗಳಿಗೆ ವಿಶೇಷ ರುಚಿ ಇರುವುದರಿಂದ ಅನೇಕ ಗ್ರಾಹಕರು ನೇರವಾಗಿ ಮರದ ಬಳಿಗೆ ಬಂದು ಖರೀದಿ ಮಾಡುತ್ತಾರೆ. ಸುರೇಶ್ ಅವರ ಬಳಿ ಇನ್ನೂ ಹಲಸಿನ ಮರಗಳಿದ್ದರೂ, ಮಾರುಕಟ್ಟೆಗೆ ಮಾರಾಟ ಮಾಡುವ ಹಣ್ಣುಗಳನ್ನು ಈ ಮರದಿಂದಲೇ ತೆಗೆದುಕೊಳ್ಳುತ್ತಾರೆ. ಉಳಿದ ಮರಗಳ ಹಣ್ಣುಗಳನ್ನು ಸಂಬಂಧಿಕರು ಮತ್ತು ಆತ್ಮೀಯರಿಗೆ ಕಳುಹಿಸಲಾಗುತ್ತದೆ.
“ಈ ಮರ ನಮ್ಮ ಕುಟುಂಬದ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ನಮ್ಮ ಬಂಧುಗಳಿಗೆ, ಸ್ನೇಹಿತರಿಗೆ ಇಲ್ಲಿನ ಹಲಸಿನ ಹಣ್ಣನ್ನು ಕಳುಹಿಸುತ್ತೇವೆ. ಇದು ಕೇವಲ ಮರ ಅಲ್ಲ, ನಮ್ಮ ಬದುಕಿನ ಭಾಗವಾಗಿದೆ” ಎಂದು ಸುರೇಶ್ ಹೆಮ್ಮೆಯಿಂದ ಹೇಳಿದ್ದಾರೆ.
ಒಟ್ಟಿನಲ್ಲಿ, ಸರಿಯಾದ ಉದ್ದೇಶದಿಂದ ನೆಟ್ಟ ಒಂದು ಮರ ಮುಂದಿನ ಪೀಳಿಗೆಗೆ ಪರಿಸರ ರಕ್ಷಣೆ ಜೊತೆಗೆ ಆರ್ಥಿಕ ಭದ್ರತೆಯನ್ನೂ ನೀಡಬಹುದು ಎಂಬುದಕ್ಕೆ ಈ ಕಥೆ ಜೀವಂತ ಉದಾಹರಣೆಯಾಗಿದೆ.

















