“ಒಂದು ವರ್ಷ ಚಿನ್ನ ಖರೀದಿಸಬೇಡಿ!”- ಯಾಕೆ ಗೊತ್ತಾ?

ದೇಶದ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಒಂದು ವರ್ಷದವರೆಗೆ ಚಿನ್ನ ಖರೀದಿಯನ್ನು ತಪ್ಪಿಸಲು ಮನವಿ ಮಾಡಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ಹಾಗೂ ಜಾಗತಿಕ ತೈಲ ಬಿಕ್ಕಟ್ಟಿನ ಹಿನ್ನೆಲೆ ವಿದೇಶಿ ವಿನಿಮಯ ಉಳಿಸುವ ಅಗತ್ಯವಿದೆ ಎಂದು ಹೇಳಿದರು. “ದೇಶಭಕ್ತಿಯ ದೃಷ್ಟಿಯಿಂದ ವಿದೇಶಿ ವಿನಿಮಯ ಉಳಿಸೋಣ” ಎಂದು ಕರೆ ನೀಡಿದ ಅವರು, ಮದುವೆ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಚಿನ್ನ ಖರೀದಿಯನ್ನು ಮಿತಿಗೊಳಿಸುವಂತೆ ಮನವಿ ಮಾಡಿದರು.

ಭಾರತವು ಜಗತ್ತಿನ ಅತಿದೊಡ್ಡ ಚಿನ್ನ ಬಳಕೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ನೂರಾರು ಟನ್ ಚಿನ್ನವನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಚಿನ್ನದ ಆಮದು ಹೆಚ್ಚಾದಂತೆ ಅಮೆರಿಕನ್ ಡಾಲರ್ ಬೇಡಿಕೆಯೂ ಹೆಚ್ಚಾಗಿ, ರೂಪಾಯಿ ಮೌಲ್ಯದ ಮೇಲೆ ಒತ್ತಡ ಉಂಟಾಗುತ್ತದೆ. ಒಂದು ವರ್ಷ ಯಾರೂ ಚಿನ್ನ ಖರೀದಿಸದೆ ಚಿನ್ನದ ಬೇಡಿಕೆ ತಗ್ಗಿದರೆ, ದರದಲ್ಲೂ ಇಳಿಕೆಯಾಗುತ್ತದೆ ಅಲ್ಲದೇ ಡಾಲರ್ ಎದುರು ರೂಪಾಯಿ ಮೌಲ್ಯವೂ ಸರಿಯಾಗುತ್ತದೆ.

ಪ್ರಧಾನಿ ಮೋದಿ ಇಂಧನ ಉಳಿತಾಯಕ್ಕೂ ಒತ್ತು ನೀಡಿದ್ದು, ಸಾಧ್ಯವಾದಲ್ಲಿ ಮನೆಯಿಂದಲೇ ಕೆಲಸ (Work From Home) ಮಾಡುವ ಪದ್ಧತಿಯನ್ನು ಅನುಸರಿಸಲು ಸಲಹೆ ನೀಡಿದ್ದಾರೆ. ವರ್ಚುವಲ್ ಸಭೆಗಳಿಗೆ ಆದ್ಯತೆ ನೀಡುವುದರಿಂದ ವಾಹನ ಬಳಕೆ ಕಡಿಮೆಯಾಗಿ ತೈಲ ಬಳಕೆ ತಗ್ಗುತ್ತದೆ ಎಂದು ಹೇಳಿದರು.

ಆರ್ಥಿಕ ತಜ್ಞರ ಅಭಿಪ್ರಾಯದಂತೆ, ಚಿನ್ನದ ಖರೀದಿ ಕಡಿಮೆಯಾದರೆ:

  • ವಿದೇಶಿ ವಿನಿಮಯ ಉಳಿತಾಯವಾಗುತ್ತದೆ
  • ಚಿನ್ನದ ಆಮದು ಪ್ರಮಾಣ ಕಡಿಮೆಯಾಗುತ್ತದೆ
  • ರೂಪಾಯಿ ಮೌಲ್ಯಕ್ಕೆ ಬೆಂಬಲ ಸಿಗುತ್ತದೆ
  • ದೇಶೀಯ ಹೂಡಿಕೆಗಳಿಗೆ ಹೆಚ್ಚು ಹಣ ಲಭ್ಯವಾಗಬಹುದು

ಆದರೆ, ಇದು ಸರ್ಕಾರದ ಕಡ್ಡಾಯ ಆದೇಶವಲ್ಲ. ದೇಶದ ಆರ್ಥಿಕ ಹಿತದೃಷ್ಟಿಯಿಂದ ಪ್ರಧಾನಿಯವರ ಸ್ವಯಂಪ್ರೇರಿತ ಮನವಿಯಾಗಿದೆ.