ಚಾಣಕ್ಯ ನಲಿಕಲಿ ಬೇಸಗೆ ಶಿಬಿರಕ್ಕೆ ತೆರೆ

ಹೆಬ್ರಿ: ಬೇಸಗೆ ಶಿಬಿರವು ಕೇವಲ ಮನರಂಜನೆಗೆ ಸೀಮಿತವಲ್ಲ, ಅದು ಮಕ್ಕಳ ಭವಿಷ್ಯ ರೂಪಿಸುವ ಸೃಜನಾತ್ಮಕ ಪಾಠಶಾಲೆಯಾಗಿದ್ದು ಅಂತಹ ವೈವಿಧ್ಯಮಯ ಬೇಸಗೆ ಶಿಬಿರವನ್ನು ಕಳೆದು 11ವರ್ಷಗಳಿಂದ ಆಯೋಜಿಸುತ್ತಿರುವ ಚಾಣಕ್ಯ ಸಂಸ್ಥೆಯ ಬೇಸಿಗೆ ಶಿಬಿರ ಕೇವಲ ಮಕ್ಕಳು ಮಾತ್ರವಲ್ಲ ಪೋಷಕರ ಮನ ಗೆದ್ದಿದ್ದು ಸಂಘಟಕರಾದ ಉದಯ ಕುಮಾರ್ ಶೆಟ್ಟಿ ದಂಪತಿಯ ಪರಿಶ್ರಮ ಶ್ಲಾಘನೀಯ ಎಂದು ಹೆಬ್ರಿ ಸರಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಹೆಬ್ರಿ ಸರಕಾರಿ ಪ. ಪೂ. ಕಾಲೇಜಿನ ಪ್ರೌಢಶಾಲಾ ಸಭಾಂಗಣದಲ್ಲಿ ಹೆಬ್ರಿ ಚಾಣಕ್ಯ ಎಜುಕೇಷನ್ ಮತ್ತು ಕಲ್ಚರಲ್ ಅಕಾಡೆಮಿ ಆಶ್ರಯದಲ್ಲಿ 11ನೇ ವರ್ಷದ ವೈವಿಧ್ಯಮಯ ಬೇಸಗೆ ಶಿಬಿರದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನವನ್ನು ವಿತರಿಸಿ ಮಾತನಾಡಿದರು.

ಸೃಜನಾತ್ಮಕ ಹಾಗೂ ಬದುಕು ಶಿಕ್ಷಣಕ್ಕೆ ಪೂರಕ:

ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಾಧಿಕಾರಿ ನಿತ್ಯಾನಂದ ಶೆಟ್ಟಿ ಮಾತನಾಡಿ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳಿಂದ ಬೆಳಗ್ಗೆಯಿಂದ ಸಂಜೆ ತನಕ ಮಕ್ಕಳಿಗೆ ಮನರಂಜನೆಯ ಜತೆಗೆ ಸೃಜನಾತ್ಮಕ ಹಾಗೂ ಬದುಕು ಶಿಕ್ಷಣಕ್ಕೆ ಪೂರಕವಾಗಿರುವ ತರಬೇತಿ ನೀಡುತ್ತಿರುವುದು ಇಲ್ಲಿನ ಗುಣಮಟ್ಟಕ್ಕೆ ಸಾಕ್ಷಿ. ಪೋಷಕರು ಇಂತಹ ಶಿಬಿರಗಳಿಗೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸೇರಿಸಬೇಕು ಎಂದರು.

ಅವಕಾಶ ನೀಡಿದವರನ್ನು ಮರೆಯಬೇಡಿ:

ತೆರೆ ಮರೆಯ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸಿದಾಗ ಮಾತ್ರ ಅವರು ಬೆಳಕಿಗೆ ಬರಲು ಸಾಧ್ಯ. ಅಂತಹ ಹಲವಾರು ಗ್ರಾಮೀಣ ಪ್ರತಿಭೆಗಳಿಗೆ ಚಾಣಕ್ಯ ಸಂಸ್ಥೆ ವೇದಿಕೆ ಕಲ್ಪಿಸಿದ ಹೆಮ್ಮೆ ಇದೆ. ಯಾರೆ ಆಗಲಿ ಅವಕಾಶ ನೀಡಿದವರನ್ನು ಮರೆಯುವ ಸಂಸ್ಕೃತಿ ಒಳ್ಳೆಯದಲ್ಲ. ವಿದ್ಯಾರ್ಥಿ ದೆಸೆಯಿಂದಲೇ ಕೃತಜ್ಞತೆಯ ಮನೋಭಾವವನ್ನು ಮೈಗೂಡಿಸಿಕೊಂಡಾಗ ತಾವೊಂದು ಕೊಂಡ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹೆಬ್ರಿ ಇದರ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಹೇಳಿದರು.

ವ್ಯಕ್ತಿತ್ವ ವಿಕಸನಕ್ಕೆ ಅವಕಾಶ:

ಮೆಸ್ಕಾಂ ಅಧಿಕಾರಿ ರಾಘವೇಂದ್ರ ಅವರು ಮಾತನಾಡಿ ಚಾಣಕ್ಯ ಸಂಸ್ಥೆ ಒಂದೇ ಸೂರಿನಡಿ ಎಲ್ಲಾ ಕಲ್ಲಾ ಪ್ರಕಾರಗಳನ್ನು ತರಬೇತಿ ನೀಡುತ್ತಾ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ವಿಶೇಷ ಅವಕಾಶ ಕಲ್ಪಿಸುತ್ತಿದೆ ಎಂದರು.

ಅಂದುಕೊಂಡದ್ದಕ್ಕಿಂತ ಭಿನ್ನವಾಗಿದೆ:

ಪೋಷಕರಾದ ಸೀತಾನದಿ ಚಂದ್ರಶೇಖರ್ ಶೆಟ್ಟಿ ಮಾತನಾಡಿ ಚಾಣಕ್ಯ ಸಂಸ್ಥೆ ಬಗ್ಗೆ ಕೇಳಿದ್ದೆ ಆದರೆ ನನ್ನ ಮಗನನ್ನ ಶಿಬಿರಕ್ಕೆ ಸೇರಿಸಿದ ಮೂಲಕ ಗೊತ್ತಾಯಿತು ಚಾಣಕ್ಯ ಸಂಸ್ಥೆಯ ತರಬೇತಿಯ ಗುಣಮಟ್ಟ ಮತ್ತು ಮಕ್ಕಳ ಬಗ್ಗೆ ಇರುವ ವಿಶೇಷ ಕಾಳಜಿ ಮೆಚ್ಚುವಂತದ್ದು. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.

ಚಿಕ್ಕ ಮಕ್ಕಳ ಬಗ್ಗೆ ವಿಶೇಷ ಕಾಳಜಿ:

ಪೋಷಕರಾದ ವಿಜಯ ಸಂತೋಷ ಮಾತನಾಡಿ ನಾಲ್ಕು ವರ್ಷದ ಒಳಗಿನ ಮಗುವನ್ನು ಮನೆಯ ಮಗುವಂತೆ ಮುದ್ದಾಡಿ ಊಟ ಮಾಡಿಸಿ ಪ್ರೀತಿ ತೋರಿಸಿದ ಚಾಣಕ್ಯ ಸಂಸ್ಥೆಯನ್ನು ಮರೆಯುವಂತಿಲ್ಲ ಎಂದರು. ಅಮಿತಾ, ಆರತಿ ಹಾಗೂ ಶಿಬಿರಾರ್ಥಿಗಳು ಅನಿಸಿಕೆ ವ್ಯಕ್ತ ಪಡಿಸಿದರು.

ಈ ಸಮಾರಂಭದಲ್ಲಿ ಹೆಬ್ರಿ ಜೇಸಿಐ ಪೂರ್ವಧ್ಯಕ್ಷೆ ಸೋನಿ ಪಿ. ಶೆಟ್ಟಿ, ಉದ್ಯಮಿ ಗಣೇಶ ಆಚಾರ್ಯ, ಪ್ರಜ್ಞಾ ನಾಯಕ್, ಮಹೇಶ್ ನಾಯ್ಕ್, ದಿವ್ಯಾ,ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಹಾಗೂ ಪೋಷಕರಿಗೆ ಬಹುಮಾನ ವಿತರಿಸಲಾಯಿತು.

ಖ್ಯಾತ ನಿರೂಪಕಿ ದೀಪಿಕಾ ಶೆಟ್ಟಿ ಅವರ ನೇತೃತ್ವದಲ್ಲಿ ಪೋಷಕರೊಂದಿಗೆ ಒಂದು ದಿನ ವಿನೂತನ ಕಾರ್ಯಕ್ರಮ ಗಮನ ಸೆಳೆಯಿತು. ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯ ಕುಮಾರ್ ಸ್ವಾಗತಿಸಿ, ನಿರೂಪಕಿ ದೀಪಿಕಾ ಶೆಟ್ಟಿ ಬೆಂಗಳೂರು ಕಾರ್ಯಕ್ರಮ ನಿರೂಪಿಸಿ, ಚಾಣಕ್ಯ ಸಂಸ್ಥೆಯ ಪ್ರಾಂಶುಪಾಲೆ ವೀಣಾ ಯು ವಂದಿಸಿದರು.

ರಮೇಶ್ ಡಿ ಚಾಂತರು ಹಾಗೂ ಸ್ಮಿತಾ ಭಟ್ ಉಡುಪಿ ನೇತೃತ್ವದ ಶೃತಿ ಸಾಗರ್ ಉಡುಪಿ ತಂಡವರಿಂದ ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕರಾದ ಸ್ಮಿತಾ ಭಟ್ ಉಡುಪಿ, ಪುತ್ತೂರು ವೆಂಕಟ ಕೃಷ್ಣ ಭಟ್,ವಿಜಯಶ್ರೀ ಮುಳಿಯ, ಪ್ರಸಾದ್ ಹೆಬ್ರಿಯವರ ಗಾಯನ ಪ್ರೇಕ್ಷಕರ ಮನ ಗೆದ್ದಿತ್ತು. ಬಳಿಕ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.