ಸಲೂನ್ ಗೆ ಬಂದು ನೀಟಾಗಿ ಕಟ್ಟಿಂಗ್ ಮಾಡಿಸಿಕೊಂಡ ಕಪಿರಾಯ: ಕೋತಿಯ ಹೇರ್ ಕಟ್ ಚೇಷ್ಟೆಗೆ ಜನ ದಿಲ್ ಖುಷ್ !

ಚಾಮರಾಜನಗರ: ಜಿಲ್ಲೆಯ ಸಂತೇಮರಹಳ್ಳಿಯಲ್ಲಿ ನಡೆದ ಅಪರೂಪದ ಕೋತಿಪ್ರಸಂಗವೊಂದು ಸ್ಥಳೀಯರನ್ನೇ ಅಚ್ಚರಿ ಮತ್ತು ಖುಷಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಮನುಷ್ಯರು ಮಾತ್ರ ಭೇಟಿ ನೀಡುವ ಹೇರ್ ಕಟಿಂಗ್ ಸಲೂನ್‌ಗೆ ಈ ಬಾರಿ ಅತಿಥಿಯಾಗಿ ಬಂದಿದ್ದು ಕೋತಿಯೊಂದು ಬಂದು, ಹೇರ್ ಕಟ್ ಮಾಡಿಸಿಕೊಂಡು ಹೋದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಸಂತೇಮರಹಳ್ಳಿಯ ‘ದೇವು ಮೆನ್ಸ್ ಸಲೂನ್’ ಬಳಿ ಕಳೆದ ಕೆಲವು ದಿನಗಳಿಂದ ಈ ಮಂಗ ಓಡಾಡುತ್ತಿತ್ತಂತೆ. ಆದರೆ ಇತ್ತೀಚೆಗೆ ಅದು ನೇರವಾಗಿ ಸಲೂನ್ ಒಳಗೆ ಪ್ರವೇಶಿಸಿ ಕನ್ನಡಿಯ ಮುಂದೆ ನಿಂತು ತನ್ನ ಪ್ರತಿಬಿಂಬವನ್ನು ನೋಡುತ್ತಾ ವಿಚಿತ್ರ ಚೇಷ್ಟೆ ಮಾಡತೊಡಗಿದೆ. ಕನ್ನಡಿಯೊಳಗಿನ ತನ್ನನ್ನೇ ನೋಡಿ ಕುತೂಹಲದಿಂದ ವರ್ತಿಸಿದ ಮಂಗನನ್ನು ಕಂಡು ಮೊದಲು ಸಲೂನ್ ಮಾಲೀಕ ದೇವು ಅವರಿಗೆ ಆತಂಕವಾದರೂ, ನಂತರ ಅದರ ಶಾಂತ ಸ್ವಭಾವ ನೋಡಿ ಅವರು ಅಚ್ಚರಿಗೊಂಡಿದ್ದಾರೆ.

ಇನ್ನಷ್ಟು ಆಶ್ಚರ್ಯಕರ ಸಂಗತಿ ಎಂದರೆ, ಮಂಗವು ಮನುಷ್ಯರಂತೆ ಕುಳಿತುಕೊಂಡೇ ಹೇರ್ ಕಟ್ ಮಾಡಿಸಿಕೊಂಡಿರುವುದು. ದೇವು ಅವರು ಬಾಚಣಿಗೆ ಮತ್ತು ಕತ್ತರಿಯಿಂದ ಅದರ ತಲೆಯ ಕೂದಲನ್ನು ಸವರಿ ಕೇಶ ವಿನ್ಯಾಸ ಮಾಡುತ್ತಿದ್ದರೂ, ಮಂಗ ಯಾವುದೇ ತೊಂದರೆ ನೀಡದೆ ಮೌನವಾಗಿ ಕುಳಿತಿತ್ತು. ಸಾಮಾನ್ಯವಾಗಿ ಮಕ್ಕಳು ಕೂಡ ಹೇರ್ ಕಟ್ ವೇಳೆ ಹಠ ಮಾಡುವ ಪರಿಸ್ಥಿತಿಯಲ್ಲಿ, ಈ ವಾನರ ತೋರಿದ ಶಿಸ್ತಿನ ವರ್ತನೆ ಎಲ್ಲರ ಗಮನ ಸೆಳೆದಿದೆ.

ಕೇಶ ವಿನ್ಯಾಸ ಮುಗಿದ ಬಳಿಕ ಮಂಗ ಸುಮ್ಮನೆ ಅಲ್ಲಿಂದ ತೆರಳಿದ್ದು, ಈ ದೃಶ್ಯವನ್ನು ಕಂಡ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದೀಗ ಮಂಗ ಹೇರ್ ಕಟ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, “ಮಂಗನಿಗೂ ಸ್ಟೈಲಿಶ್ ಆಗಿರಬೇಕು ಅನ್ನಿಸಿರಬೇಕು” ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.