ಉಡುಪಿ: ಇಲ್ಲಿನ ಜಿಲ್ಲಾ ಪೊಲೀಸರು ಬೀಗ ಹಾಕಿದ ಮನೆಗಳ ಸುರಕ್ಷತೆಗೆ “ಲಾಕ್ಡ್ ಹೌಸ್ ಬೀಟ್ ಸಿಸ್ಟಮ್” (LHBS) ಎಂಬ ವಿನೂತನ ಯೋಜನೆ ಆರಂಭಿಸಿದ್ದಾರೆ.
ಕೆಲಸ, ಪ್ರವಾಸ ಅಥವಾ ಇತರ ಕಾರಣಗಳಿಂದ ಮನೆಗೆ ಬೀಗ ಹಾಕಿ ಹೊರಡುವ ನಿವಾಸಿಗಳ ಮನೆಗಳ ಮೇಲೆ ಪೊಲೀಸರು ವಿಶೇಷ ನಿಗಾ ಇಡಲಿದ್ದಾರೆ. ಸಂಬಂಧಪಟ್ಟ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿ ಹಗಲು ಹಾಗೂ ರಾತ್ರಿ ವೇಳೆ ಮನೆಗಳಿಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಲಿದ್ದಾರೆ.
ಪ್ರಯಾಣಕ್ಕೆ ತೆರಳುವವರು ಜಿಲ್ಲಾ ನಿಯಂತ್ರಣ ಕೊಠಡಿಯ ಸಹಾಯವಾಣಿ ಸಂಖ್ಯೆ 0820-2526709 ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಬಳಿಕ ವಾಟ್ಸಾಪ್ ಮೂಲಕ ಮನೆಯ ವಿಳಾಸ, ಹೊರಡುವ ಹಾಗೂ ಮರಳುವ ದಿನಾಂಕ-ಸಮಯ ಮತ್ತು ಮನೆಯ ಮುಂದೆ ತೆಗೆದ ಸೆಲ್ಫಿ ಫೋಟೋ ಕಳುಹಿಸಬೇಕು.
ಈ ಮಾಹಿತಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ರವಾನೆಯಾಗಿದ್ದು, ಸೂಚಿಸಿದ ಅವಧಿವರೆಗೆ ಬೀಟ್ ಸಿಬ್ಬಂದಿ ಮನೆ ಮೇಲ್ವಿಚಾರಣೆ ನಡೆಸಲಿದ್ದಾರೆ.
ಈ ಸೌಲಭ್ಯವು ಪ್ರತ್ಯೇಕ ಮನೆಗಳಿಗೆ ಮಾತ್ರ ಲಭ್ಯವಿದ್ದು, ಅಪಾರ್ಟ್ಮೆಂಟ್ ಹಾಗೂ ಬಹುಮಹಡಿ ಫ್ಲಾಟ್ಗಳಿಗೆ ಅನ್ವಯಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರು ಯಾವುದೇ ಅಪರಿಚಿತ ಸಂಖ್ಯೆಗಳೊಂದಿಗೆ ತಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

















