ಉಡುಪಿ: ಇಂದಿನ ಪ್ರಪಂಚದಲ್ಲಿ ಮರ, ಬೀಜದ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ. ಆದರೆ ಭೂಮಿ ಬಗ್ಗೆ ಯಾರು ಮಾತನಾಡುತ್ತಿಲ್ಲ. ಪ್ರತಿಯೊಂದು ಬೀಜದಲ್ಲೂ ಮರವಾಗುವ ಶಕ್ತಿ ಹಾಗೂ ಗುಣ ಇದೆ. ಅದಕ್ಕೆ ಬೇಕಾದ ಭೂಮಿ ಸಿದ್ಧಪಡಿಸಬೇಕು. ಆಗ ಅದು ಮರವಾಗಿ ಬೆಳೆಯುತ್ತದೆ. ಅದೇ ರೀತಿ ಹಿರಿಯರಾದ ನಾವು ಮಕ್ಕಳಿಗೆ ಬೇಕಾದ ಉತ್ತಮ ಪರಿಸರವನ್ನು ಸೃಷ್ಠಿ ಮಾಡಬೇಕಾಗಿದೆ. ಆಗ ಮಾತ್ರ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಹಿರಿಯ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಕರಾವಳಿಯ ನಿರ್ದಿಗಂತದ ವತಿಯಿಂದ ಉಡುಪಿ ಬೆಳ್ಳಂಪಳ್ಳಿಯ ಕರಾವಳಿಯ ನಿರ್ದಿಗಂತದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರ ‘ಕಾವು ಗೂಡು-2026’ ಇದರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳನ್ನು ಅವರ ಪಾಡಿಗೆ ಹಾಡಲು, ಕುಣಿಯಲು, ನಲಿಯಲು ಬಿಟ್ಟರೆ ಎಂತಹ ಚೈತನ್ಯ, ಸಂತೋಷವನ್ನು ಕೊಡುತ್ತಾರೆ ಎಂಬುದಕ್ಕೆ ಈ ಶಿಬಿರವೇ ಸಾಕ್ಷಿ. ನಿರ್ದಿಂಗತ ಕನಸು ಅದೆ ಆಗಿದೆ. ನಮಗೆ ಮಕ್ಕಳು ಮುಖ್ಯವಾಗಿ ದ್ದಾರೆ. ಶಿವರಾಮ ಕಾರಂತರು, ಕುವೆಂಪು, ತೇಜಸ್ವಿ ಮಕ್ಕಳಿಗಾಗಿ ಬರೆದರು. ಬಿ.ವಿ. ಕಾರಂತರು ಮಕ್ಕಳಿಗಾಗಿ ನಾಟಕ ಮಾಡಿದರು. ಅಂತಹ ಹಿರಿಯರು ಕೂಡ ಮಕ್ಕಳು ಎಷ್ಟು ಮುಖ್ಯ ಎಂಬುದನ್ನು ಅರಿತಿದ್ದರು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮುತ್ತು, ಶಿಶಿರ್ ಶೆಟ್ಟಿ, ಶಾಂತಪ್ಪ, ರಂಗ ನಿರ್ದೇಶಕರಾದ ಗಣೇಶ್ ಮಂದಾರ್ತಿ, ಮಂಜು ಕಾಸರಗೋಡು ಮತ್ತು ಪ್ರಶಾಂತ್ ಉದ್ಯಾವರ್, ರಾಜು ಮಣಿಪಾಲ್ ಮೊದಲಾದವರು ಉಪಸ್ಥಿತರಿದ್ದರು. ನಿರ್ದಿಗಂತದ ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶಿಬಿರದ ಮಕ್ಕಳ ಗುಬ್ಬಚ್ಚಿ ಗೂಡು ತಂಡದಿಂದ ಗಣೇಶ್ ಮಂದಾರ್ತಿ ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ನಸ್ರುದ್ದೀನ್ ಕತೆಗಳು’, ಬಣ್ಣದ ಗೂಡು ತಂಡದಿಂದ ಮಂಜು ಕಾಸರಗೋಡು ಅವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಭೋಗಿರಾಜ- ಯೋಗಿರಾಜ’ ಮತ್ತು ಜೇನು ಗೂಡು ತಂಡದಿಂದ ಪ್ರಶಾಂತ್ ಉದ್ಯಾವರ್ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಕುವೆಂಪು ದೃಶ್ಯ ಕಾವ್ಯ ನಾಟಕ ಪ್ರದರ್ಶನಗೊಂಡಿತು.

















