ಯುಪಿಎಂಸಿ: ಕಾಲೇಜು ವಾರ್ಷಿಕೋತ್ಸವ ಮತ್ತು ಸಂಸ್ಥಾಪಕರ ಸಂಸ್ಮರಣೆ

ಉಡುಪಿ: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ 35ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಏಪ್ರಿಲ್ 29ರಂದು ಕಾಲೇಜಿನ ಉಪೇಂದ್ರ ಮಂಟಪದಲ್ಲಿ ಜರಗಿತು.

ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಾಚಾರ್ಯರಾದ ಮಂಜುನಾಥ್ ಭಟ್ ಮುಖ್ಯ ಅಭ್ಯಾಗತರಾಗಿ ಮಾತನಾಡುತ್ತಾ ನಾವೇ ಕಲಿಸಿದ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಬಿ.ಕಾಂ ಮತ್ತು ಬಿಬಿಎ ಪದವಿಗಳಲ್ಲಿ ಅತ್ಯುನ್ನತ ಶೈಕ್ಷಣಿಕ ಸಾಧನೆ ಗೈದಿದ್ದು, ನಾನೇ ಮುಖ್ಯ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಕ್ಷಣ ಹೃದಯ ತುಂಬಿ ಬಂದು, ಈ ಸಂಸ್ಥೆ ನಮ್ಮದೇ ಸಂಸ್ಥೆ ಎಂಬ ಭಾವನೆ ಉಂಟಾಗಿ, ಇದೊಂದು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಂಸ್ಥೆ ಎಂದು ಹೇಳಲು ಹೆಮ್ಮೆ ಎನಿಸಿದೆ ಎಂದು ಹೇಳಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಸಂಸ್ಥಾಪಕರಾದ ಉಪೇಂದ್ರ ಪೈ ಮತ್ತು ಡಾ.ಮಾಧವ ಪೈಗಳ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಸಮರ್ಪಿಸುವ ಮೂಲಕ ಸಂಸ್ಥಾಪಕರ ದಿನವನ್ನೂ ಆಚರಿಸಲಾಯಿತು. ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಪ್ರಭಾ ಕಾಮತ್ ಪ್ರಸ್ತುತ ಶೈಕ್ಷಣಿಕ ವರ್ಷದ ಕಾರ್ಯಕಲಾಪಗಳ ವರದಿಯನ್ನು ಮಂಡಿಸಿದರು. ಕಾಲೇಜಿನ ನಿರ್ದೇಶಕರಾದ ಪ್ರೊ. ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು.

ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾಲೇಜಿನ ವಾಣಿಜ್ಯ ಉಪನ್ಯಾಸಕರಾದ ರಾಘವೇಂದ್ರ ಜಿ.ಜಿ, ಹರಿಕೇಶವ್, ಶ್ರೀಮತಿ ಸಿಬಿ ಪೌಲ್, ಕು. ಇಂದಿರಾ ಈ ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಮೂರು ವರ್ಷಗಳ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ತೃತೀಯ ಬಿಬಿಎ ತರಗತಿಯ ಆಶಿಕ್ ಹಾಗೂ ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿಯನ್ನು ತೃತೀಯ ಬಿ.ಕಾಂ ನ ವಿನಾಯಕ ಪಡೆದುಕೊಂಡರು.

ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಸವಿತಾ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ರವಿರಾಜ್ ಹೆಚ್. ಪಿ , ಅಧ್ಯಕ್ಷರಾದ ಮನೋಹರ ಶೆಟ್ಟಿ ತೋನ್ಸೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ರೋವಿಲ್ ಚಿರಾಗ್ ಸ್ವಾಗತಿಸಿದರು, ವರ್ಷಾ ಕಾಮತ್ ವಂದಿಸಿದರು, ಸನ್ನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.