ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಹೊಸ ಜಾಹೀರಾತು ಅಭಿಯಾನ ಆರಂಭಿಸಿದ್ದು, ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವುದಾಗಿ ‘ಶಿಕ್ಷಣ ಗ್ಯಾರಂಟಿ’ ಘೋಷಿಸಿದೆ.
ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ವಿದ್ಯಾರ್ಥಿ ಜೀವನದ ಮಹತ್ವದ ಹಂತಗಳಾಗಿವೆ. ಇತ್ತೀಚೆಗೆ ಪ್ರಕಟವಾದ ಫಲಿತಾಂಶಗಳಲ್ಲಿ ರಾಜ್ಯ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ ತೇರ್ಗಡೆ ಪ್ರಮಾಣ ಕಂಡುಬಂದಿದೆ. ಈ ವರ್ಷ ಸರ್ಕಾರಿ ಶಾಲೆ-ಕಾಲೇಜುಗಳೂ ಉತ್ತಮ ಸಾಧನೆ ಮಾಡಿದ್ದು, ಎಸ್ಎಸ್ಎಲ್ಸಿಯಲ್ಲಿ ಶೇ.94.10 ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.86.48 ಫಲಿತಾಂಶ ದಾಖಲಾಗಿದೆ. ಕಳೆದ ವರ್ಷದೊಂದಿಗೆ ಹೋಲಿಸಿದರೆ ಕ್ರಮವಾಗಿ ಶೇ.16.82 ಹಾಗೂ ಶೇ.16ರಷ್ಟು ಏರಿಕೆ ಕಂಡುಬಂದಿದೆ.
ಈ ಸಾಧನೆಯ ಬೆನ್ನಲ್ಲೇ ಹೆಚ್ಚಿನ ವಿದ್ಯಾರ್ಥಿಗಳನ್ನು ಸರ್ಕಾರಿ ಶಿಕ್ಷಣ ಸಂಸ್ಥೆಗಳತ್ತ ಸೆಳೆಯುವ ಉದ್ದೇಶದಿಂದ ಸರ್ಕಾರ ಜಾಹೀರಾತು ಬಿಡುಗಡೆ ಮಾಡಿದ್ದು, ಪೋಷಕರಿಗೂ ವಿದ್ಯಾರ್ಥಿಗಳಿಗೂ ಹಲವು ಭರವಸೆಗಳನ್ನು ನೀಡಿದೆ.
ಸರ್ಕಾರ ಘೋಷಿಸಿದ 8 ಶಿಕ್ಷಣ ಗ್ಯಾರಂಟಿಗಳು:
1. ಶಿಕ್ಷಕರ ಕೊರತೆಗೆ ಮುಕ್ತಿ
5ನೇ ತರಗತಿಯವರೆಗೆ ಪ್ರತಿ ತರಗತಿಗೆ ಒಬ್ಬ ಶಿಕ್ಷಕರನ್ನು ನಿಯೋಜಿಸಲಾಗುವುದು. 6ನೇ ತರಗತಿಯಿಂದ ಪ್ರತಿ ವಿಷಯಕ್ಕೆ ಪ್ರತ್ಯೇಕ ವಿಷಯವಾರು ಶಿಕ್ಷಕರ ನೇಮಕ ಮಾಡಲಾಗುವುದು.
2. ಪೋಷಕರ ಆಯ್ಕೆಯ ಬೋಧನಾ ಮಾಧ್ಯಮ
ಕನ್ನಡದ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವೂ ಲಭ್ಯವಾಗಲಿದೆ. ಇಂಗ್ಲಿಷ್ ಬೋಧನೆಗಾಗಿ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುವುದು.
3. ಉಚಿತ ಸಾರಿಗೆ ಸೌಲಭ್ಯ
ಕರ್ನಾಟಕ ಪಬ್ಲಿಕ್ ಶಾಲೆ (KPS) ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು.
4. ಡಿಜಿಟಲ್ ಶಿಕ್ಷಣಕ್ಕೆ ಒತ್ತು
1ನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ, 3ನೇ ತರಗತಿಯಿಂದ ಕೃತಕ ಬುದ್ಧಿಮತ್ತೆ (AI) ಪಾಠ ಆರಂಭಿಸಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ KPS ಶಾಲೆಗಳಿಗೆ ಕಂಪ್ಯೂಟರ್ ಶಿಕ್ಷಕರ ನೇಮಕಾತಿ ನಡೆಯಲಿದೆ.
5. ಕಲೆ ಮತ್ತು ದೈಹಿಕ ಶಿಕ್ಷಣ
ಸಂಗೀತ, ಕಲೆ ಹಾಗೂ ದೈಹಿಕ ಶಿಕ್ಷಣಕ್ಕೆ ಪ್ರತ್ಯೇಕ ಶಿಕ್ಷಕರ ನೇಮಕಾತಿ ಮಾಡಲಾಗುವುದು. ಈ ವರ್ಷದಿಂದಲೇ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಪ್ರಕ್ರಿಯೆ ಆರಂಭವಾಗಲಿದೆ.
6. ಶೈಕ್ಷಣಿಕೇತರ ಕೆಲಸಗಳಿಂದ ಶಿಕ್ಷಕರಿಗೆ ಮುಕ್ತಿ
ಶೈಕ್ಷಣಿಕೇತರ ಕಾರ್ಯ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗುವುದು. ಇದರಿಂದ ಶಿಕ್ಷಕರು ಬೋಧನೆಗೆ ಹೆಚ್ಚಿನ ಸಮಯ ಮೀಸಲಿಡಲು ಸಾಧ್ಯವಾಗಲಿದೆ.
7. ಕಲಿಕೆಯ ಗುಣಮಟ್ಟ ಮೇಲ್ವಿಚಾರಣೆ
ಪ್ರತಿ ಮಗುವಿನ ಪ್ರಗತಿಗಾಗಿ ‘ಪಾಠ ಆಧಾರಿತ ಮೌಲ್ಯಮಾಪನ’ ವ್ಯವಸ್ಥೆ ಜಾರಿಯಾಗಲಿದೆ. ಪ್ರತಿ ಎರಡು ತಿಂಗಳಿಗೊಮ್ಮೆ ಪೋಷಕರು-ಶಿಕ್ಷಕರ ಕಡ್ಡಾಯ ಸಭೆ ನಡೆಯಲಿದೆ.
8. ಕೌಶಲ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ
6ನೇ ತರಗತಿಯಿಂದಲೇ ಕೌಶಲ ಶಿಕ್ಷಣ ಆರಂಭವಾಗಲಿದೆ. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ಸೌಲಭ್ಯ ಒದಗಿಸಲಾಗುವುದು.
ಸರ್ಕಾರದ ಈ ಹೊಸ ಯೋಜನೆಗಳು ಸರ್ಕಾರಿ ಶಾಲೆಗಳ ಮೇಲಿನ ಜನರ ವಿಶ್ವಾಸ ಹೆಚ್ಚಿಸುವ ಜೊತೆಗೆ, ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿರೀಕ್ಷೆ ಮೂಡಿಸಿದೆ.

















