ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

ಬೆಂಗಳೂರು: ಕೆಐಎಡಿಬಿ ಭೂಸ್ವಾಧೀನ ಕಾರ್ಯಕ್ಕೆ ಸಂಬಂಧಿಸಿದ ಬಾಕಿ ಕಂದಾಯ ಪ್ರಕರಣವನ್ನು ಇತ್ಯರ್ಥಪಡಿಸಲು 15 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಸಹಾಯಕ ಆಯುಕ್ತರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿ ನಾಗಪ್ರಶಾಂತ್ ಅವರು ಬೆಂಗಳೂರಿನ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಲ್ಲಿ ವಿಶೇಷ ಸಹಾಯಕ ಆಯುಕ್ತ (ಉತ್ತರ) ಹಾಗೂ ವಿಶೇಷ ಭೂಸ್ವಾಧೀನ ಅಧಿಕಾರಿ-1 ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ನಾಗಪ್ರಶಾಂತ್ ಹಾಗೂ ಅವರ ಹೊರಗುತ್ತಿಗೆ ಚಾಲಕ ಕುಮಾರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಬೀಳಿಸಿ ಬಂಧಿಸಿದ್ದಾರೆ.

ಯಲಹಂಕದ ಅತ್ತೂರು ನಿವಾಸಿ ರವಿಕುಮಾರ್ (41) ಅವರು, ಬಾಕಿ ಇರುವ ಕ್ಷಿಪ್ರ ಕಂದಾಯ ತಂಡ (ಆರ್‌ಆರ್‌ಟಿ) ಪ್ರಕರಣದಲ್ಲಿ ಅನುಕೂಲಕರ ಆದೇಶ ನೀಡಲು ಅಧಿಕಾರಿ 30 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತರನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ.

ಅಧಿಕಾರಿಯ ಸೂಚನೆಯಂತೆ ಚಾಲಕ ಕುಮಾರ್ ಈ ಮೊದಲು 15 ಲಕ್ಷ ರೂ. ಸ್ವೀಕರಿಸಿದ್ದರೆ, ಬುಧವಾರ ಮತ್ತೊಮ್ಮೆ 15 ಲಕ್ಷ ರೂ. ಪಡೆಯುವ ವೇಳೆ ಲೋಕಾಯುಕ್ತ ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.