ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ “ಎಲ್ಎಲ್ಎಮ್ ಮತ್ತು ಏಜೆಂಟಿಕ್ ವರ್ಕ್ಫ್ಲೋ” ವಿಷಯದ ಮೇಲೆ ಒಂದು ದಿನದ ಕಾರ್ಯಾಗಾರ ರಿಸರ್ಚ್ ಲ್ಯಾಬ್ನಲ್ಲಿ ಏಪ್ರಿಲ್ 18ರಂದು ನಡೆಯಿತು.
ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಮೈಕ್ರೋಸಾಫ್ಟ್ ಸಂಸ್ಥೆಯ ಹಿರಿಯ ಸಾಫ್ಟ್ವೇರ್ ಎಂಜಿನಿಯರ್ ಶ್ರೀ ಗಣೇಶ್ ಪೂಜಾರಿಯವರು ಲಾರ್ಜ್ ಲ್ಯಾಂಗ್ವೇಜ್ ಮಾದರಿಗಳ (ಐಐಒ) ರಚನೆ, ಸಾಮರ್ಥ್ಯಗಳು ಹಾಗೂ ನೈಜ ಜೀವನದಲ್ಲಿನ ಬಳಕೆಗಳ ಕುರಿತು ವಿವರಿಸಿದರು. ಜೊತೆಗೆ ಏಜೆಂಟಿಕ್ ವರ್ಕ್ಫ್ಲೋ ತತ್ವಗಳು, ಸ್ವಯಂಚಾಲಿತ ಏಜೆಂಟ್ಗಳ ಪಾತ್ರ ಹಾಗೂ ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅವುಗಳ ಮಹತ್ವವನ್ನು ತಿಳಿಸಿದರು.
ವಿಭಾಗದ ಮುಖ್ಯಸ್ಥರಾದ ಶ್ರೀ ಮಹೇಶ್ ಕುಮಾರ್ ಅವರು ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಶಿಕ್ಷಣ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುತ್ತವೆ ಎಂದರು.

ಕಾರ್ಯಕ್ರಮದ ಸಂಯೋಜಕರಾದ ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ವಿಜಯಶ್ರೀ, ಶ್ರೀ ಮಹೇಶ್ ಪೂಜಾರಿ ಹಾಗೂ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ವಾಣಿಶ್ರೀ ಪ್ರಾರ್ಥಿಸಿ, ವಿಶ್ವಾಸ್ ಸ್ವಾಗತಿಸಿ, ಶ್ರೇಯಾ ಅತಿಥಿಗಳನ್ನು ಪರಿಚಯಿಸಿ, ಸಿಂಚನಾ ವಂದಿಸಿ, ರಿಷಿತಾ ನಿರೂಪಿಸಿದರು.

















