ಪ್ರತಿ ತಿಂಗಳ ಮೊದಲ ದಿನದಂತೆ ಮೇ 1ರಂದೂ ಅಡುಗೆ ಅನಿಲ ಕಂಪನಿಗಳು ಸಿಲಿಂಡರ್ ದರ ಪರಿಷ್ಕರಣೆ ಮಾಡಲು ಸಜ್ಜಾಗಿವೆ. ಈ ಬಾರಿ ಗೃಹಬಳಕೆ ಹಾಗೂ ವಾಣಿಜ್ಯ ಸಿಲಿಂಡರ್ ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಜನಸಾಮಾನ್ಯರಲ್ಲಿ ಆತಂಕ ಹೆಚ್ಚಿಸಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ, ಹಾರ್ಮುಜ್ ಜಲಸಂಧಿಯಲ್ಲಿ ಮುಂದುವರಿದಿರುವ ಉದ್ವಿಗ್ನ ಪರಿಸ್ಥಿತಿ ಹಾಗೂ ಸರಕು ಸಾಗಣೆಯಲ್ಲಿ ಉಂಟಾಗಿರುವ ಅಡಚಣೆಗಳಿಂದ ಅನಿಲ ಪೂರೈಕೆಯ ಮೇಲೂ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ ಮೇ 1ರಿಂದ ಸಿಲಿಂಡರ್ ದರ ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಭಾರತದ ಪ್ರಮುಖ ತೈಲ ಕಂಪನಿಗಳಾದ Indian Oil Corporation (ಇಂಡೇನ್), Bharat Petroleum (ಭಾರತ್ ಗ್ಯಾಸ್) ಮತ್ತು Hindustan Petroleum (ಎಚ್ಪಿ ಗ್ಯಾಸ್) ಅಕ್ರಮ ಸಂಗ್ರಹಣೆ, ಬ್ಲ್ಯಾಕ್ ಮಾರ್ಕೆಟ್ ವ್ಯವಹಾರ ಹಾಗೂ ಸಬ್ಸಿಡಿ ದುರುಪಯೋಗ ತಡೆಯಲು ಹೊಸ ನಿಯಮಗಳನ್ನು ಜಾರಿಗೆ ತಂದಿವೆ.
ನಗರ ಪ್ರದೇಶಗಳಲ್ಲಿ LPG ಬುಕಿಂಗ್ ನಡುವಿನ ಅವಧಿಯನ್ನು 21ರಿಂದ 25 ದಿನಗಳಿಗೆ ಹೆಚ್ಚಿಸಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ವಿಸ್ತರಿಸಲಾಗಿದೆ. ನಿಗದಿತ ಅವಧಿ ಮುಗಿಯುವ ಮೊದಲು ಬುಕ್ ಮಾಡಿದರೆ ಸಿಲಿಂಡರ್ ಸಿಗುವುದಿಲ್ಲ.
ಈ ಹಿಂದೆ ಮಾರ್ಚ್ ತಿಂಗಳಲ್ಲಿ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ದರ ₹60 ಹೆಚ್ಚಿಸಲಾಗಿತ್ತು. 19 ಕೆಜಿ ವಾಣಿಜ್ಯ ಸಿಲಿಂಡರ್ ದರವೂ ₹218ರವರೆಗೆ ಏರಿಕೆ ಕಂಡಿತ್ತು. ಏಪ್ರಿಲ್ 1ರಂದು ಮತ್ತೆ ವಾಣಿಜ್ಯ ಸಿಲಿಂಡರ್ ದರ ಪರಿಷ್ಕರಣೆ ಮಾಡಲಾಗಿತ್ತು. ಈಗ ಮೇ ತಿಂಗಳಲ್ಲೂ ಮತ್ತೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಕಟ್ಟುನಿಟ್ಟಿನ ಕ್ರಮ
ಇನ್ನು ಗ್ಯಾಸ್ ಸಿಲಿಂಡರ್ ವಿತರಣೆಯಲ್ಲೂ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿದೆ. ಸಿಲಿಂಡರ್ ಪಡೆಯುವ ವೇಳೆ OTP ಕಡ್ಡಾಯವಾಗಿದೆ. ಗ್ರಾಹಕರು ಬುಕ್ಕಿಂಗ್ ಮಾಡಿದ ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಡೆಲಿವರಿ ಸಿಬ್ಬಂದಿ ಮನೆಗೆ ಬಂದಾಗ OTP ಪರಿಶೀಲನೆಯಾದ ನಂತರವೇ ಸಿಲಿಂಡರ್ ನೀಡಲಾಗುತ್ತದೆ.
ಅದೇ ರೀತಿ KYC ಪೂರ್ಣಗೊಳಿಸುವುದೂ ಕಡ್ಡಾಯವಾಗಿದೆ. ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ಮೂಲಕ ಆನ್ಲೈನ್ನಲ್ಲೇ KYC ಪೂರ್ಣಗೊಳಿಸಬಹುದು. ಗ್ಯಾಸ್ ಏಜೆನ್ಸಿ ಕಚೇರಿ ಅಥವಾ ಡೆಲಿವರಿ ಸಿಬ್ಬಂದಿಯ ಬಯೋಮೆಟ್ರಿಕ್ ಯಂತ್ರದ ಮೂಲಕವೂ ಈ ಪ್ರಕ್ರಿಯೆ ಮಾಡಬಹುದು.
KYC ಪೂರ್ಣಗೊಳಿಸದಿದ್ದರೆ ಸರ್ಕಾರದ ಸಬ್ಸಿಡಿ ಸಿಗದೇ ಹೋಗುವ ಸಾಧ್ಯತೆ ಇದ್ದು, ಗ್ಯಾಸ್ ಬುಕಿಂಗ್ ಹಾಗೂ ವಿತರಣೆಯಲ್ಲೂ ತೊಂದರೆ ಎದುರಾಗಬಹುದು. ಹೀಗಾಗಿ ಗ್ರಾಹಕರು ಅಗತ್ಯ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

















