ಉಡುಪಿ: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ಪೂಜಾ ಹೆಗ್ಡೆ, ಸಿನಿಮಾ ಲೋಕದ ಗ್ಲಾಮರ್ ಬದಿಗಿಟ್ಟು ತುಳುನಾಡಿನ ಮಣ್ಣಿನ ಮಗಳಾಗಿ ಭಕ್ತಿ ಮೆರೆದಿದ್ದಾರೆ.
ಕುತ್ಯಾರು ಮೂಲದ ಬೆಟ್ಟು ನಾಗ ಬ್ರಹ್ಮಸ್ಥಾನದ ತಮ್ಮ ಮೂಲಮನೆಯಲ್ಲಿ ನಡೆದ ಪವಿತ್ರ ‘ಡೆಕ್ಕೆ ಬಲಿ’ ಸೇವೆಯಲ್ಲಿ ಅವರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಎಷ್ಟೇ ಎತ್ತರಕ್ಕೆ ಬೆಳೆದರೂ ತನ್ನ ಸಾಂಸ್ಕೃತಿಕ ಬೇರುಗಳನ್ನು ಮರೆಯದ ಪೂಜಾ, ಅಲ್ಲಿ ನೆರೆದಿದ್ದ ಭಕ್ತರ ನಡುವೆ ಅತ್ಯಂತ ಸರಳವಾಗಿ ಬೆರೆತು ಅಪ್ಪಟ ‘ಕುಡ್ಲದ ಪೊಣ್ಣು’ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಕಾಡಿನಿಂದ ಆವೃತವಾದ ನಾಗಬನದಲ್ಲಿ ಕುಟುಂಬದ ಯಜಮಾನ ಜಯ ಶೆಟ್ರ ಸೇವೆಯನ್ನುಕಕ್ಕುಂಜೆ ನಾಗಾನಂದ ವಾಸುದೇವ ಆಚಾರ್ಯರ ನೇತೃತ್ವದಲ್ಲಿ ನಾಗದರ್ಶನದ ನಡೆದವು.
ಕೃಷ್ಣ ಪ್ರಸಾದ್ ತಂಡದ ಡಮರು ಮೇಳದ ನರ್ತನ ನಡುವೆ ನಡೆದ ಈ ಧಾರ್ಮಿಕ ವಿಧಿವಿಧಾನಗಳು ಭಕ್ತರ ಮನದಲ್ಲಿ ಭಕ್ತಿಭಾವದ ಪರಾಕಾಷ್ಠೆಯನ್ನುಂಟು ಮಾಡಿದವು.

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ನಟಿಯೊಬ್ಬರು ತನ್ನ ಹಿರಿಯರ ನಂಬಿಕೆಗೆ ಗೌರವ ಸಲ್ಲಿಸಿ, ಕರಾವಳಿಯ ಈ ಶ್ರೇಷ್ಠ ನಾಗಾರಾಧನೆಯ ಸಂಪ್ರದಾಯದಲ್ಲಿ ಪಾಲ್ಗೊಂಡಿರುವುದು ತುಳುನಾಡಿನ ಸಂಸ್ಕೃತಿಯ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.



















