ಮಳೆಗಾಲದ ಮೊದಲೇ ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಶುರು, ರೇಲ್ವೆ ಇಲಾಖೆ ನೀಡಿದ ಅಪ್ಡೇಟ್ ಗಳೇನು?

ಬೆಂಗಳೂರು : ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯಿಂದ ಸಂತಸದ ಸುದ್ದಿ ಸಿಕ್ಕಿದೆ. ಈ ಮಾರ್ಗದಲ್ಲಿ ಹೈಸ್ಪೀಡ್ ವಂದೇ ಭಾರತ್ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಇದೆ. ಮಳೆಗಾಲಕ್ಕೂ ಮುನ್ನವೇ ರೈಲು ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.

ಹಾಸನ-ಮಂಗಳೂರು ರೈಲು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಆರಂಭಿಕ ಪರೀಕ್ಷೆಗಳು ಈಗಾಗಲೇ ನಡೆದಿವೆ. ಜೂನ್ ತಿಂಗಳೊಳಗೆ ಪ್ರಾಯೋಗಿಕ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆ ಇದೀಗ ಸಾಕಾರವಾಗುವ ಹಂತ ತಲುಪಿದೆ.

ಘಾಟ್ ವಿಭಾಗದಲ್ಲಿ ವೇಗ ಮಿತಿ

ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ 55 ಕಿ.ಮೀ ಘಾಟ್ ವಿಭಾಗದಲ್ಲಿ ಕಡಿದಾದ ಇಳಿಜಾರುಗಳು ಇರುವುದರಿಂದ ಸುರಕ್ಷತಾ ಕಾರಣಕ್ಕೆ ವೇಗ ಮಿತಿ ವಿಧಿಸಲಾಗಲಿದೆ. ಈ ಭಾಗದಲ್ಲಿ ರೈಲುಗಳು ಗಂಟೆಗೆ ಗರಿಷ್ಠ 30 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಧ್ಯತೆ ಇದೆ. ಉಳಿದ ಭಾಗಗಳಲ್ಲಿ ಹೆಚ್ಚು ವೇಗದಲ್ಲಿ ಓಡಲಿದೆ. ಪ್ರಸ್ತುತ ಬೆಂಗಳೂರು-ಮಂಗಳೂರು ಪ್ರಯಾಣಕ್ಕೆ ಸುಮಾರು 9ರಿಂದ 10 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. ವಂದೇ ಭಾರತ್ ರೈಲು ಆರಂಭವಾದರೆ ಕನಿಷ್ಠ 1 ರಿಂದ 2 ಗಂಟೆಗಳಷ್ಟು ಸಮಯ ಉಳಿಯುವ ನಿರೀಕ್ಷೆ ಇದೆ.

ಟಿಕೆಟ್ ದರ?

ವಂದೇ ಭಾರತ್ ರೈಲಿನ ಟಿಕೆಟ್ ದರ ಎಕ್ಸ್‌ಪ್ರೆಸ್ ರೈಲುಗಳಿಗಿಂತ ಹೆಚ್ಚಿರಬಹುದೆಂದು ಅಂದಾಜಿಸಲಾಗಿದೆ. ಆದರೆ ಅಧಿಕೃತ ದರ ಹಾಗೂ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಇನ್ನೂ ಪ್ರಕಟಿಸಿಲ್ಲ.

ಕರಾವಳಿ ಜನರ ಬಹುದಿನದ ಕನಸು

ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದು, ವೇಗದ ರೈಲು ಸೇವೆಗೆ ಹಲವು ವರ್ಷಗಳಿಂದ ಬೇಡಿಕೆ ಕೇಳಿಬರುತ್ತಿತ್ತು. ಇದೀಗ ವಂದೇ ಭಾರತ್ ರೈಲು ಸೇವೆ ಆರಂಭವಾದರೆ ಕರಾವಳಿ ಭಾಗದ ಜನರಿಗೆ ಇದು ದೊಡ್ಡ ಅನುಕೂಲವಾಗಲಿದೆ.

ಇದರ ಜೊತೆಗೆ ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಹಾಗೂ ಹುಬ್ಬಳ್ಳಿ-ಧಾರವಾಡ ಮಾರ್ಗವಾಗಿ ಮುಂಬೈಗೆ ಸೂಪರ್ ಫಾಸ್ಟ್ ರೈಲು ಸೇವೆಗಳನ್ನೂ ಮುಂದಿನ ದಿನಗಳಲ್ಲಿ ಆರಂಭಿಸಲು ರೈಲ್ವೆ ಇಲಾಖೆ ಯೋಜನೆ ರೂಪಿಸಿದೆ.