ಶೃಂಗೇರಿ ವಿಧಾನಸಭಾ ಕ್ಷೇತ್ರದತ್ತ ಮತದಾರರ ಚಿತ್ತ, ಅಂಚೆ ಮತಗಳ ಮರುಎಣಿಕೆ, ಕಾದಿದೆಯಾ ಟ್ವಿಸ್ಟ್?

ಶೃಂಗೇರಿ: ಹೈಕೋರ್ಟ್ ನಿರ್ದೇಶನದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಕಾರ್ಯ ಮೇ 2ರಂದು ನಡೆಯಲಿದೆ. ಐಡಿಎಸ್‌ಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮರುಎಣಿಕೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ. ಮರುಎಣಿಕೆಯಲ್ಲಿ ಏನಾಗಲಿದೆ? ಯಾವ ಅಭ್ಯರ್ಥಿಗೆ ಜಾಸ್ತಿ ಮತಗಳು ಬಿದ್ದಿದೆ ಎನ್ನುವುದು ಬಹಿರಂಗವಾಗಲಿದೆ. ಹಾಗಾಗಿ ಶೃಂಗೇರಿ ವಿಧಾನಸಭಾ ಕ್ಷೇತ್ರದತ್ತ ಮತದಾರರ ಚಿತ್ತ ಮರುಎಣಿಕೆಯತ್ತ ವಾಲಿದೆ.

ಮೇ 2ರಂದು ಬೆಳಿಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿ ಗೌರವ್ ಶೆಟ್ಟಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರೊಂದಿಗೆ ನಾಲ್ವರು ಸಹಾಯಕ ಚುನಾವಣಾಧಿಕಾರಿಗಳು ಸಹಕಾರ ನೀಡಲಿದ್ದಾರೆ. ಪಾರದರ್ಶಕತೆಗಾಗಿ ಎಣಿಕೆ ನಡೆಯುವ ಕೊಠಡಿಯಲ್ಲಿ ಸಿಸಿಟಿವಿ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ವೇಳೆ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇ ಗೌಡ ಮತ್ತು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಸೇರಿದಂತೆ ಪಕ್ಷಗಳ ಪ್ರತಿನಿಧಿಗಳು ಹಾಜರಾಗುವ ಸಾಧ್ಯತೆ ಇದೆ.

ಮರುಎಣಿಕೆಗೆ ತಡೆ ಕೋರುವ ಅವಧಿ ಏಪ್ರಿಲ್ 20ರಂದು ಅಂತ್ಯಗೊಂಡ ಹಿನ್ನೆಲೆ, ಹೈಕೋರ್ಟ್ ಮೇ 2ರಂದು ಮರುಎಣಿಕೆ ನಡೆಸುವಂತೆ ಆದೇಶಿಸಿದೆ.

ಏನಾಗಿತ್ತು? 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇ ಗೌಡ ಅವರು ಕೇವಲ 201 ಮತಗಳ ಅಂತರದಿಂದ ಜಯಗಳಿಸಿದ್ದರು. ಒಟ್ಟು 2,811 ಅಂಚೆ ಮತಗಳಲ್ಲಿ 279 ಮತಗಳು ಅಮಾನ್ಯಗೊಂಡಿದ್ದವು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಡಿ.ಎನ್. ಜೀವರಾಜ್ ಮರುಎಣಿಕೆಗೆ ಮನವಿ ಸಲ್ಲಿಸಿದ್ದರೂ, ಅದನ್ನು ಪರಿಗಣಿಸದೆ ಫಲಿತಾಂಶ ಘೋಷಿಸಲಾಗಿತ್ತು.ಇದೀಗ ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆಗೆ ಹೈಕೋರ್ಟ್ ಸೂಚನೆ ನೀಡಿರುವುದು ಶಾಸಕ ಟಿ.ಡಿ. ರಾಜೇ ಗೌಡ ಅವರಿಗೂ ಶಾಕಿಂಗ್ ಆಗಿದ್ದು ಟ್ವಿಸ್ಟ್ ಏನಿರಲಿದೆ ಎನ್ನುವುದನ್ನು ಮೇ 2ರಂದು ಕಾದು ನೋಡಬೇಕಿದೆ.