ದಕ್ಷಿಣ ಕನ್ನಡದಲ್ಲಿ ಬಿಸಿಲಿನ ತೀವ್ರತೆ: ಅಂತರ್ಜಲ ಮಟ್ಟ ಕುಸಿತ, ಕುಡಿಯುವ ನೀರಿಗೆ ಆತಂಕ
ರಾಜ್ಯದಲ್ಲಿ ಅತೀ ಹೆಚ್ಚು ಮಳೆಯಾಗುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈ ಬಾರಿ ಪರಿಸ್ಥಿತಿ ತೀವ್ರವಾಗಿ ಬದಲಾಗಿದೆ. 35–36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, ಬಿಸಿಲಿನ ತೀವ್ರತೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಕುಸಿಯುತ್ತಿದೆ ಅಂತರ್ಜಲ, ಬರಿದಾಗುತ್ತಿವೆ ಬಾವಿಗಳು
ಜಿಲ್ಲೆಯ ಹಲವು ಭಾಗಗಳಲ್ಲಿ, ವಿಶೇಷವಾಗಿ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ಪ್ರದೇಶಗಳಲ್ಲಿ, ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಎಂದಿಗೂ ನೀರಿನಿಂದ ತುಂಬಿರುತ್ತಿದ್ದ ಬಾವಿಗಳು ಈಗ ಬರಿದಾಗುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.
ಅತಿಯಾದ ಬೋರ್ ವೆಲ್ ಕೊರೆತ, ನೀರಿನ ದುರ್ಬಳಕೆ
ರಾಜ್ಯ ಅಂತರ್ಜಲ ನಿರ್ದೇಶನಾಲಯದ ಇತ್ತೀಚಿನ ಸರ್ವೆ ವರದಿ ಪ್ರಕಾರ, ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಸುಧಾರಣೆ ಕಂಡುಬಂದಿದ್ದರೂ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಕುಸಿತ ಕಂಡುಬಂದಿದೆ. ತೀವ್ರ ಬಿಸಿಲಿನ ಜೊತೆಗೆ, ಅತಿಯಾದ ಬೋರ್‌ವೆಲ್ ಕೊರೆತ ಮತ್ತು ನೀರಿನ ದುರ್ಬಳಕೆ ಈ ಪರಿಸ್ಥಿತಿಗೆ ಪ್ರಮುಖ ಕಾರಣಗಳಾಗಿ ಗುರುತಿಸಲಾಗಿದೆ.
ಪರಿಸ್ಥಿತಿ ಗಂಭೀರವಾಗಿರುವುದರಿಂದ, ಜನರು ಮಧ್ಯಾಹ್ನ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುತ್ತಿದ್ದಾರೆ. ರೈತರು ತಮ್ಮ ತೋಟಗಳಿಗೆ ನೀರು ಪೂರೈಸಲು ಕಷ್ಟಪಡುತ್ತಿದ್ದು, ನೀರನ್ನು ಅತಿ ಮಿತವಾಗಿ ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದೇ ಸ್ಥಿತಿ ಮುಂದುವರಿದರೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

















