ಉಡುಪಿ/ದ.ಕ: ರಾಜ್ಯದ ಅತ್ಯಧಿಕ ಮಳೆಯ ಪ್ರದೇಶಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಈ ಬಾರಿ ಪರಿಸ್ಥಿತಿ ಭೀಕರವಾಗಿದೆ. ಹೆಸರಿಗೆ ಸ್ಮಾರ್ಟ್ ಸಿಟಿ ಎಂದು ಕರೆಸಿಕೊಳ್ಳುತ್ತಿರುವ ಮಂಗಳೂರು ಮತ್ತು ಇಡೀ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಅಲ್ಲದೇ ಸಾಮಾನ್ಯವಾಗಿ ಮಳೆಯ ಸಮೃದ್ಧಿಯಿಂದ ಪ್ರಸಿದ್ಧಿಯಾಗಿರುವ ದ.ಕ ಜಿಲ್ಲೆಯಲ್ಲಿ ಈಗ ಬಿಸಿಲಿನ ತೀವ್ರತೆ ಹೆಚ್ಚಾಗಿ ಜನರನ್ನು ಕಂಗೆಡಿಸಿದೆ.
ನೀರಿನ ಮೂಲಗಳೇ ಮಾಯ:ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ತಾಪಮಾನ 35ರಿಂದ 36 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿದ್ದು, ಅದರ ಪರಿಣಾಮವಾಗಿ ಅಂತರ್ಜಲಮಟ್ಟದಲ್ಲಿ ಭಾರೀ ಕುಸಿತ ಕಂಡುಬರುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವ ಆತಂಕ ಹೆಚ್ಚಾಗಿದೆ.
ದ.ಕ ದ ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಉಡುಪಿ ಜಿಲ್ಲೆಯ ಉಡುಪಿ ನಗರ, ಕುಂದಾಪುರ, ಕಾಪು, ಕಾರ್ಕಳ ಭಾಗದಲ್ಲಿಯೂ ವಿಪರೀತ ಕಾಡುಗಳ ನಾಶದಿಂದ ಪರಿಸರ ಮಾಲಿನ್ಯದಿಂದ ಪ್ರಾಕೃತಿಕ ಜಲ ಮೂಲಗಳು ಬರಿದಾಗುತ್ತಿದೆ. ಇತ್ತೀಚಿನವರೆಗೂ ನೀರಿನಿಂದ ತುಂಬಿದ್ದ ಬಾವಿಗಳು ಈಗ ಬರಿದಾಗುತ್ತಿರುವುದು ಸ್ಥಳೀಯರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅರಣ್ಯ ನಾಶದಿಂದ ಭವಿಷ್ಯದಲ್ಲಿ ಪರಿಸ್ಥಿತಿ ಇನ್ನಷ್ಟು ಘೋರವಾಗಲಿದೆ.
ರಾಜ್ಯ ಅಂತರ್ಜಲ ನಿರ್ದೇಶನಾಲಯದ ವರದಿ ಪ್ರಕಾರ, ರಾಜ್ಯದ ಅನೇಕ ಭಾಗಗಳಲ್ಲಿ ಅಂತರ್ಜಲ ಮಟ್ಟ ಸುಧಾರಣೆಯ ಲಕ್ಷಣಗಳು ಕಂಡುಬಂದಿದ್ದರೂ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಕುಸಿತ ಮುಂದುವರಿದಿದೆ.
ಈ ಪರಿಸ್ಥಿತಿಗೆ ಹೆಚ್ಚಿದ ತಾಪಮಾನ, ಅತಿಯಾದ ಬೋರ್ವೆಲ್‌ಗಳ ತೋಡಿಕೆ ಮತ್ತು ನೀರಿನ ಅತಿಯಾದ ಬಳಕೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಸೂಚಿಸಿದ್ದಾರೆ. ನೀರಿನ ಸಂರಕ್ಷಣೆ ಕ್ರಮಗಳನ್ನು, ಮಾಲಿನ್ಯವನ್ನು, ಅರಣ್ಯ ಮತ್ತು ಪರಿಸರ ನಾಶನ್ನು ತಕ್ಷಣ ನಿಲ್ಲಿಸದೇ ಇದ್ದರೆ ಭವಿಷ್ಯದಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

















