ಮಂಗಳೂರು/ಉಡುಪಿ: ಕರಾವಳಿ ಕರ್ನಾಟಕ ಭಾಗದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಿಶ್ರ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ ಎಂದು Indian Meteorological Department (ಐಎಂಡಿ) ಮುನ್ಸೂಚನೆ ನೀಡಿದೆ.ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಮತ್ತು ತೇವಾಂಶ ಹೆಚ್ಚಾಗಿಯೇ ಮುಂದುವರಿಯಲಿದ್ದು, ಏಪ್ರಿಲ್ 26ರಿಂದ 29ರವರೆಗೆ ಗುಡುಗು-ಮಿಂಚಿನೊಂದಿಗೆ ಮಧ್ಯಮ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.
ಮಳೆಯ ಸಾಧ್ಯತೆ ಇದ್ದರೂ ಮಧ್ಯಾಹ್ನ ವೇಳೆಯಲ್ಲಿ ತಾಪಮಾನ ಏರಿಕೆಯಾಗುವ ನಿರೀಕ್ಷೆಯಿದ್ದು, ಕೆಲವು ಭಾಗಗಳಲ್ಲಿ ಶಾಖದ ಅಲೆಗಳ ಲಕ್ಷಣಗಳು ಕಾಣಿಸಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಗುಡುಗು-ಮಿಂಚಿನ ಸಂದರ್ಭಗಳಲ್ಲಿ ಮೀನುಗಾರರು ಮತ್ತು ಕರಾವಳಿ ನಿವಾಸಿಗಳು ವಿಶೇಷ ಜಾಗರೂಕತೆ ವಹಿಸಬೇಕು ಎಂದು ಸೂಚಿಸಲಾಗಿದೆ.
ಏಪ್ರಿಲ್ 24ರ ರಾತ್ರಿ ಹಲವೆಡೆ ಮಧ್ಯಮ ಮಳೆಯಾಗಿದ್ದು, ನಂತರದ ದಿನಗಳಲ್ಲಿ ಮೋಡ ಕವಿದ ವಾತಾವರಣದ ನಡುವೆ ಮಧ್ಯಂತರ ಬಿಸಿಲು ಕಂಡುಬಂದಿದೆ. ಶುಕ್ರವಾರ ತಡರಾತ್ರಿ ಬೈಂದೂರು ಭಾಗಗಳಲ್ಲಿ ಮಳೆಯಾದ ವರದಿಯಾಗಿದೆ.
ಇನ್ನೂ, ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 34.7°C ದಾಖಲಾಗಿದ್ದು, ಇದು ಋತುಮಾನ ಸರಾಸರಿಗಿಂತ 0.3°C ಹೆಚ್ಚಾಗಿದೆ. ಕನಿಷ್ಠ ತಾಪಮಾನ 25.3°C ಆಗಿದ್ದು, ಸಾಮಾನ್ಯ ಮಟ್ಟಕ್ಕಿಂತ 0.2°C ಹೆಚ್ಚಾಗಿದೆ.
ಮುಂದಿನ ದಿನಗಳಲ್ಲಿ ಬಿಸಿಲಿನ ತೀವ್ರತೆ ಜೊತೆಗೆ ದಿಡೀರ್ ಗುಡುಗು ಸಹಿತ ಮಳೆಯ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

















