ಕುಂದಾಪುರ: ಉಡುಪಿ ಜಿಲ್ಲೆಯ ಕಾಳಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸೋಡು ಶ್ರೀ ಕುಮಾರಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿರುವ ವಾರಾಹಿ ಕಾಲುವೆಗೆ ಬಿದ್ದ ಬೃಹತ್ ಗಾತ್ರದ ಕಾಡುಕೋಣವನ್ನು ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಕಾಡಿನಿಂದ ನಾಡಿನತ್ತ ಬಂದಿದ್ದ ಕಾಡುಕೋಣ ಕಾಲುವೆಗೆ ಬಿದ್ದಿದ್ದು, ಸುಮಾರು 20 ಗಂಟೆಗಳ ಕಾಲ ಕಾಲುವೆಯಲ್ಲೇ ಸಿಲುಕಿಕೊಂಡಿತ್ತು. ಇದು ನೀರು ಮತ್ತು ಆಹಾರಕ್ಕಾಗಿ ನಾಡಿನತ್ತ ಬಂದಿತ್ತು. ರಾತ್ರಿಯಿಡೀ ಕಾಲುವೆಯಲ್ಲೇ ಕಳೆದಿದ್ದ ಕಾಡುಕೋಣವನ್ನು ಮೇಲಕ್ಕೆತ್ತಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿತು.

ಮೊದಲು ಕಾಲುವೆಯೊಳಗೆ ಮಣ್ಣು ತುಂಬಿ ಕಾಡುಕೋಣ ಮೇಲಕ್ಕೆ ಬರಲು ಅನುವು ಮಾಡಿಕೊಡಲಾಯಿತು. ಶನಿವಾರ ಬೆಳಿಗ್ಗೆ ಮತ್ತಷ್ಟು ಮಣ್ಣು ಹಾಕಿ ಇಳಿಜಾರು ನಿರ್ಮಿಸಲಾಯಿತು.
ಬಳಿಕ ಜೆಸಿಬಿ ಸಹಾಯದಿಂದ ಹಗ್ಗದ ನೆರವಿನಿಂದ ಕಾಡುಕೋಣವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸ್ಥಳೀಯರು ಕೈಜೋಡಿಸಿದರು. ಈ ಕಾರ್ಯಾಚರಣೆಸ್ಥಳೀಯರಲ್ಲಿ ಕುತೂಹಲಕ್ಕೆ ಕಾರಣವಾಯಿತು.

















