ಬಿಜೆಪಿ ಮಾಜಿ ನಾಯಕನ ಪುತ್ರನ ವಿರುದ್ಧ ಅತ್ಯಾಚಾರ ಪ್ರಕರಣ: ಸಂತ್ರಸ್ತ ಯುವತಿಗೆ ಪ್ರತೀ ತಿಂಗಳು ರೂ.75 ಸಾವಿರ ನೀಡಲು ಕೋರ್ಟ್ ಆದೇಶ

ಮಂಗಳೂರು: ಮದುವೆಯಾಗುವ ಭರವಸೆ ನೀಡಿ ಯುವತಿಯನ್ನು ನಂಬಿಸಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಪುತ್ತೂರಿನ ಬಿಜೆಪಿ ಮಾಜಿ ಮುಖಂಡ ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧದ ಪ್ರಕರಣದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಆರೋಪಿ ಕೃಷ್ಣ ಜೆ. ರಾವ್ ಅವರು ಸಲ್ಲಿಸಿದ್ದ ಪ್ರಕರಣ ರದ್ದುಪಡಿಸುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ. ಆದರೆ, ಈ ತಡೆಯಾಜ್ಞೆಯು ನ್ಯಾಯಾಲಯ ವಿಧಿಸಿರುವ ಒಂದು ಪ್ರಮುಖ ಷರತ್ತಿಗೆ ಒಳಪಟ್ಟಿದೆ.

ಮಗು ಹಾಗೂ ತಾಯಿಯ ಪಾಲನೆಗೆ ಸೂಚನೆ: ಸಂತ್ರಸ್ತೆ ಹಾಗೂ ಆಕೆಯಿಂದ ಜನಿಸಿದ ಮಗುವಿನ ನಿರ್ವಹಣೆಗಾಗಿ ಆರೋಪಿಯು ಪ್ರತಿ ತಿಂಗಳು 75,000 ರೂಪಾಯಿಗಳನ್ನು ಪಾವತಿಸಬೇಕು ಎಂದು ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. ಈ ಮೊತ್ತವನ್ನು ಆರೋಪಿಯು ವೈಯಕ್ತಿಕವಾಗಿ ಅಥವಾ ತನ್ನ ಪೋಷಕರ ಮೂಲಕ ತಾಯಿಗೆ ತಲುಪಿಸಬೇಕು ಎಂದು ಸೂಚಿಸಲಾಗಿದೆ. ಮೊದಲ 75 ಸಾವಿರ ರೂಪಾಯಿಯನ್ನು ಇಂದಿನಿಂದ ಒಂದು ವಾರದೊಳಗೆ ಪಾವತಿಸಬೇಕು. ನಂತರದ ತಿಂಗಳುಗಳಲ್ಲಿಯೂ ಇದೇ ಮೊತ್ತದ ಪಾವತಿಯನ್ನು ಮುಂದುವರಿಸಬೇಕು. ಈ ಆರ್ಥಿಕ ನೆರವು ನೀಡುವ ಷರತ್ತಿನ ಅಡಿಯಲ್ಲಿ ಮಾತ್ರ, ಪ್ರಕರಣದ ಮುಂದಿನ ಎಲ್ಲಾ ನ್ಯಾಯಾಲಯದ ಪ್ರಕ್ರಿಯೆಗಳಿಗೆ ತಡೆ ನೀಡಲಾಗಿದೆ.

ಹಿನ್ನೆಲೆ: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭಿಣಿಯಾಗಿಸಿ ನಂತರ ವಂಚಿಸಿದ ಆರೋಪದ ಮೇಲೆ ಕೃಷ್ಣ ಜೆ. ರಾವ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ಈ ಪ್ರಕರಣದ ಕಾನೂನು ಹೋರಾಟ ಹೈಕೋರ್ಟ್ ಮೆಟ್ಟಿಲೇರಿದ್ದು, ಸಂತ್ರಸ್ತೆಯ ಹಿತದೃಷ್ಟಿಯಿಂದ ನ್ಯಾಯಾಲಯವು ಈ ಮಧ್ಯಂತರ ಪರಿಹಾರವನ್ನು ಘೋಷಿಸಿದೆ.