ವಿಜಯಪುರ: ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ 6 ವರ್ಷದ ಬಾಲಕ ಸಿದ್ದಾರ್ಥ ಮಲ್ಲಿಕಾರ್ಜುನ ಅರಕೇರಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಮಗ ನೋಡಲು ತನ್ನಂತಿಲ್ಲ ಎಂಬ ಕಾರಣಕ್ಕೆ ತಂದೆ ಮಲ್ಲಿಕಾರ್ಜುನ ಅರಕೇರಿ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.
ಮಾರ್ಚ್ 16ರಂದು ಮಗನನ್ನು ಶಾಲೆಗೆ ಸೇರಿಸುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದ ಆತ, ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿ ಬಳಿ ಕೃಷ್ಣಾ ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ ಬಳಿಕ ಮಗ ಹಾಸ್ಟೆಲ್‌ನಲ್ಲಿ ಇದ್ದಾನೆ ಎಂದು ಕುಟುಂಬಕ್ಕೆ ಸುಳ್ಳು ಮಾಹಿತಿ ನೀಡಿದ್ದಾನೆ.
ಏಪ್ರಿಲ್ 1ರಂದು ಮಗನ ಹುಟ್ಟುಹಬ್ಬದ ದಿನ ಮಗನನ್ನು ಕರೆದುಕೊಂಡು ಬರುವಂತೆ ತಾಯಿ ಭಾಗ್ಯಶ್ರೀ ಒತ್ತಾಯಿಸಿದಾಗ ಪ್ರಕರಣ ಬಯಲಾಗಿದ್ದು, ಅನುಮಾನಗೊಂಡ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ವಿಚಾರಣೆಯಲ್ಲಿ ಆರೋಪಿ ತಂದೆ ಕೊಲೆಯನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

















