ಕಾರ್ಕಳ: ಅಜೆಕಾರು ಪದ್ಮ ನಗರದಲ್ಲಿ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಪದವಿಪೂರ್ವ ಕಾಲೇಜಿನ ಲೋಕಾರ್ಪಣೆ ಎ 14 ರಂದು ನಡೆಯಿತು.
ಕಾಲೇಜಿನ ಶಾರದಾ ಮಾತೆ ಹಾಗೂ ರಾಮಲಲ್ಲಾ ಮೂರ್ತಿ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ಶಾಸಕ ಸುನಿಲ್ ಕುಮಾರ್ ಮಾತನಾಡಿ, ರಾಜ್ಯದಲ್ಲೇ ಹೆಸರು ಗಳಿಸಿದ ಜ್ಞಾನಸುಧಾ ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ರಾಷ್ಟ್ರಪ್ರೇಮ ಮೂಡಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.ಜ್ಞಾನಸುಧಾ ರಾಜ್ಯದ ನಂಬರ್ ಒನ್ ಶಿಕ್ಷಣ ಸಂಸ್ಥೆ, ಗ್ರಾಮೀಣ ಭಾಗವಾದ ಅಜೆಕಾರಿನಲ್ಲಿ ಪ್ರಾರಂಭವಾದ ಈ ಸಂಸ್ಥೆ ಗ್ರಾಮದ ಅಭಿವೃದ್ಧಿಗೆ ಪೂರಕವಾಗಿದೆ.

ಸಂಸ್ಥೆ ಶಿಕ್ಷಣದ ಜತೆಗೆ ಸಾಮಾಜಿಕ ಚಟುವಟಿಕೆಗಳಿಗೆ ನಿರಂತರ ಸಹಾಯ ಮಾಡುತ್ತಿದೆ ಎಂದರು.
ಮಾಜಿ ಮುಖ್ಯಮಂತ್ರಿ ಡಾ| ವೀರಪ್ಪ ಮೊಯ್ಲಿ ಪದವಿಪೂರ್ವ ಕಾಲೇಜು ಉದ್ಘಾಟಿಸಿ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಡಾ| ಸುಧಾಕರ ಶೆಟ್ಟಿಯವರು ಮಾದರಿ. ಸಿಇಟಿ ಪ್ರಾರಂಭವಾದ ಬಳಿಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಉನ್ನತ ಹಂತಕ್ಕೆ ಏರುವಂತಾಗಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳಿಗೆ ದೇಶದ ಸಂಸ್ಕೃತಿ ಅರಿವು ಮೂಡಿಸ ಬೇಕು. ಅವಿಭಜಿತ ದ. ಕ. ಜಿಲ್ಲೆ ಶಿಕ್ಷಣದ ಭಂಡಾರವಾಗಲಿ ಎಂದರು.

ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿಭಾಗವನ್ನು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ| ಮೋಹನ್ ಆಳ್ವ ಉದ್ಘಾಟಿಸಿ, ಶಿಕ್ಷಕ ವೃತ್ತಿಯೊಂದಿಗೆ ಶಿಕ್ಷಣ ಸಂಸ್ಥೆ ಕಟ್ಟುವುದು ಆದರ್ಶ ಕಾರ್ಯ ಎಂದರು.
ನಿಟ್ಟೆ ಡಾ| ವಿಶಾಲ್ ಹೆಗ್ಡೆ ಹಾಗೂ ಉದ್ಯಮಿ ಶಿವರಾಮ್ ಜಿ ಶೆಟ್ಟಿ ಸಂಸ್ಥೆಯ ಪ್ರಯೋಗಶಾಲೆಗಳನ್ನು ಉದ್ಘಾಟಿಸಿದರು. ಸುಧಾಕರ ಶೆಟ್ಟಿಯವರ ಮಾತೃಶ್ರೀ ಯವರ ಜನ್ಮ ಶತಮಾನೋತ್ಸವ ಪ್ರಯುಕ್ತ ಪದ್ಮನಗರ ಗಣಪತಿ ದೇವರಿಗೆ 108 ಸೀಯಾಳಾಭಿಷೇಕ ನಡೆಸಲಾಯಿತು. ಆಸ್ಪತ್ರೆಗಳಿಗೆ ಸಹಾಯಧನ ವಿತರಿಸಲಾಯಿತು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ದೇವಸ್ಥಾನದ ಆಡಳಿತ ಸಮಿತಿ ಗೌರವ ಅಧ್ಯಕ್ಷ ಶಿವರಾಮ ಜಿ. ಶೆಟ್ಟಿ ಪ್ರಕಾಶಿನಿ ಗೋಪಾಲ ಭಂಡಾರಿ, ಶ್ರೀ ನಾರಾಯಾಣಗುರು ಅಭಿವೃದ್ಧಿ ನಿಗಮದ ರಾಜ್ಯ ಅಧ್ಯಕ್ಷ ಎo.ಮಂಜುನಾಥ ಪೂಜಾರಿ, ಉದ್ಯಮಿ ಸುಜಯ ಕುಮಾರ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಪ್ರತಿಭಾನಿತ್ವ ವಿದ್ಯಾರ್ಥಿಗಳನ್ನು ಉಚಿತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರನ್ನು ಗೌರವಿಸಲಾಯಿತು.
ಕಾಲೇಜಿನ ಎನ್ ಸಿಸಿ ತಂಡದಿಂದ ಅತಿಥಿಗಳಿಗೆ ಗೌರವ ಸಲ್ಲಿಸಲಾಯಿತು. ಸಂಸ್ಥೆ ಪ್ರವರ್ತಕ ಡಾ| ಸುಧಾಕರ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು.

















