ಗ್ಯಾಸ್ ಸಿಲಿಂಡರ್ ಕನೆಕ್ಷನ್ ತಗೋಳೋಕೆ ನಿಯಮ ಬದಲು. ಈಗ ಸುಲಭದಲ್ಲಿ 5 ಕೆಜಿ ಸಿಲಿಂಡರ್ ಪಡೀಬೋದು… ಇಲ್ಲಿದೆ ಸರಳ ವಿಧಾನ

ಪಶ್ಚಿಮ ಏಷ್ಯಾದ ಯುದ್ಧದ ತೀವ್ರತೆ ಮತ್ತು ಇಂಧನ ಪೂರೈಕೆಯಲ್ಲಿ ಉಂಟಾದ ಅಡಚಣೆಗಳ ನಡುವೆಯೂ, ಕೇಂದ್ರ ಸರ್ಕಾರ ಸಾಮಾನ್ಯ ಜನರಿಗೆ ಮಹತ್ವದ ಸಡಿಲಿಕೆ ನೀಡಿದೆ. ಈಗ ದೇಶಾದ್ಯಂತ ವಿಳಾಸದ ಪುರಾವೆ ಇಲ್ಲದಿದ್ದರೂ 5 ಕೆಜಿ ತೂಕದ ಸಣ್ಣ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸುಲಭವಾಗಿ ಖರೀದಿಸಬಹುದು. ಈ ಸೌಲಭ್ಯ ಪಡೆಯಲು ಕೇವಲ ಒಂದು ಅಧಿಕೃತ ಗುರುತಿನ ಚೀಟಿ ಸಾಕು.

ವಲಸೆ ಕಾರ್ಮಿಕರು, ಬಾಡಿಗೆ ಮನೆಯಲ್ಲಿರುವವರಿಗೆ ಸಹಾಯ

ಇತ್ತೀಚಿನ ದಿನಗಳಲ್ಲಿ ಈ 5 ಕೆಜಿ ಸಿಲಿಂಡರ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಸರ್ಕಾರವೂ ಜನರ ಬೇಡಿಕೆಗೆ ಅನುಗುಣವಾಗಿ ಪೂರೈಕೆಯನ್ನು ಹೆಚ್ಚಿಸಿದೆ. ಅಧಿಕೃತ ಮಾಹಿತಿಯ ಪ್ರಕಾರ, ಮಾರ್ಚ್ 23ರಿಂದ ಇತ್ತೀಚಿನವರೆಗೆ ಸುಮಾರು 6.6 ಲಕ್ಷ ಸಣ್ಣ ಸಿಲಿಂಡರ್‌ಗಳು ಮಾರಾಟವಾಗಿವೆ. ಏಪ್ರಿಲ್ 4ರಂದು ಮಾತ್ರವೇ 90 ಸಾವಿರಕ್ಕೂ ಹೆಚ್ಚು ಸಿಲಿಂಡರ್‌ಗಳು ಮಾರಾಟವಾಗಿರುವುದು ಗಮನಾರ್ಹ. ವಲಸೆ ಕಾರ್ಮಿಕರು, ಬಾಡಿಗೆ ಮನೆಗಳಲ್ಲಿ ವಾಸಿಸುವವರು ಹಾಗೂ ಶಾಶ್ವತ ವಿಳಾಸವಿಲ್ಲದವರಿಗೆ ಇದು ವಿಶೇಷವಾಗಿ ಸಹಾಯಕವಾಗಿದೆ.

ಅಗತ್ಯ ದಾಖಲೆಗಳು


ಆಧಾರ್ ಕಾರ್ಡ್

 ಪ್ಯಾನ್ ಕಾರ್ಡ್

ಡ್ರೈವಿಂಗ್ ಲೈಸೆನ್ಸ್

ವೋಟರ್ ಐಡಿ

ರಾಜ್ಯ/ಕೇಂದ್ರ ಸರ್ಕಾರ ನೀಡಿರುವ ಗುರುತಿನ ಚೀಟಿ

ಯಾವುದೇ ಒಂದು ಅಧಿಕೃತ ಗುರುತಿನ ಚೀಟಿ ಇದ್ದರೆ ಸಾಕು. ವಿಳಾಸ ಪರಿಶೀಲನೆ ಪ್ರಕ್ರಿಯೆಯಿಲ್ಲದೆ ಸರಳವಾಗಿ ಸಿಲಿಂಡರ್ ಪಡೆಯಬಹುದು.