ಉಡುಪಿ: ಪರ್ಕಳದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ನೂತನ ಆಡಿಟೋರಿಯಂ ಲೋಕಾರ್ಪಣಾ ಸಮಾರಂಭ.

ಉಡುಪಿ: ಜಿಲ್ಲೆಯ ಪರ್ಕಳದ ಹೆರ್ಗ ಗ್ರಾಮದಲ್ಲಿರುವ ನಾರಾಯಣಗುರು ರಸ್ತೆಯಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ.) ವತಿಯಿಂದ ನೂತನವಾಗಿ ನಿರ್ಮಿಸಲಾದ ಬ್ರಹ್ಮಶ್ರೀ ನಾರಾಯಣಗುರು ಆಡಿಟೋರಿಯಂ ಇದರ ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ ಎ.5 ರಂದು ಜರುಗಿತು.

ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಆಡಿಟೋರಿಯಂ ಉದ್ಘಾಟಿಸಿ ಮಾತನಾಡಿ, ಸಮಾಜಕ್ಕೆ ದೊಡ್ಡ ಕೊಡುಗೆ ಅನ್ನುವ ರೀತಿಯಲ್ಲಿ ನಾರಾಯಣ ಗುರುಗಳ‌ ಹೆಸರಿನಲ್ಲಿ ನವೀಕೃತ ಸಭಾಭವನವನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ. ಸಂಘವನ್ನು ಇನ್ನಷ್ಟು ಸಂಘಟಿತಗೊಳಿಸುವ ಮೂಲಕ ಸಮಾಜಕ್ಕೆ ಕೊಡುಗೆಯಾಗಿ ನೀಡುವ ಯೋಜನೆ ಸಂಘದ್ದು ಎಂದರು.

ಬ್ರಹ್ಮಶ್ರೀ ನಾರಾಯಣ ಗುರುಗಳು ವಿಶ್ವ ಮಾನವನ ಸಂದೇಶ ನೀಡಿದ್ದಾರೆ. ಆ ಸಂದೇಶವನ್ನು ಸಂಘ ಇನ್ನಷ್ಟು ಪ್ರಚುರಪಡಿಸಿದೆ. ಸಮಾಜದ ಒಳಿತಿಗೋಸ್ಕರ ಸಂಘ ದೊಡ್ಡ ಕೊಡುಗೆ ಕೊಟ್ಟಿದೆ. ಇದೀಗ ಪರ್ಕಳ ಸಂಘ ಉಡುಪಿ ಜಿಲ್ಲೆಯಲ್ಲಿ ಮಾದರಿ ಸಂಘವಾಗಿ ಹೊರಹೊಮ್ಮಿದೆ. ಪಕ್ಷಾತೀತವಾಗಿ ಎಲ್ಲರ ಸಹಕಾರ ಪಡೆದು ಸಂಘ ಬೆಳವಣಿಗೆ ಕಂಡಿದೆ ಎಂದರು.

ಸಮಾಜದಲ್ಲಿ ಒಗ್ಗಟ್ಟಿದ್ದಾಗ ಮಾತ್ರ ಏಳಿಗೆ ಸಾಧ್ಯ: ಯಶ್ಪಾಲ್ ಸುವರ್ಣ

ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಮಾತನಾಡಿ, ಪರ್ಕಳ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂಘ, ತನ್ನ ಕನಸನ್ನು ಈಡೇರಿಸಿಕೊಂಡಿದೆ. ಸಮಾಜದಲ್ಲಿ ಒಗ್ಗಟ್ಟಿದ್ದಾಗ ಮಾತ್ರ ಏಳಿಗೆ ಸಾಧ್ಯ. ಜನತೆಗೆ ಸಂಸ್ಕಾರವನ್ನು ನೀಡುವ ಕೆಲಸ ಸಂಘ ಮಾಡುತ್ತಿದೆ. ಸಮಾಜದ ಜನರ ಕಾರ್ಯಕ್ರಮಗಳಿಗೆ ಇದೀಗ ಹೊಸ ಆಡಿಟೋರಿಯಂ ದೊರೆತಿದ್ದು ಇದು ಸಂಘಕ್ಕೆ ಹೊಸ ಶಕ್ತಿ ತಂದಿದೆ. ಶಾಸಕನಾಗಿ ಎಂದಿಗೂ ಪರ್ಕಳ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂಘದ ಜೊತೆಗಿದ್ದೇನೆ ಎಂದರು.

ಸರಕಾರದ ಸವಲತ್ತನ್ನು ಸಮಾಜ ಬಳಸಿಕೊಳ್ಳಲಿ: ಮಂಜುನಾಥ ಪೂಜಾರಿ ಮುದ್ರಾಡಿ:

ಬಿಲ್ಲವ ಸಮಾಜದ ಮೂಲಕ ಊರಿನ, ನಾಡಿನ ಅಭಿವೃದ್ಧಿಯಾಗಿದೆ. ಸರಕಾರದ ಸವಲತ್ತುಗಳನ್ನು ಬಳಸಿಕೊಳ್ಳುವ ಕೆಲಸವನ್ನು ನಮ್ಮ ಸಮಾಜ ಮಾಡಬೇಕಿದೆ. ನಮ್ಮ ಸಮಾಜದ ಮಹಿಳಾ ಸಬಲೀಕರಣ, ಶೈಕ್ಷಣಿಕ ಅಭಿವೃದ್ಧಿ ಎಲ್ಲವೂ ಆಗಬೇಕಿದೆ. ಅಂತಹ ಕೆಲಸವನ್ನು ಪರ್ಕಳ ಸಂಘ ಮಾಡಿದೆ.ಮುಂದೆಯೂ ಮಾಡಲಿ ಮಂಜುನಾಥ ಪೂಜಾರಿ ಮುದ್ರಾಡಿ ಹೇಳಿದರು.

ಉದ್ಯಮಿ, ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಯಾವ ಸಮುದಾಯದಲ್ಲಿ ಒಗ್ಗಟ್ಟಿರುತ್ತದೋ ಆಗ ಸಮುದಾಯದಲ್ಲಿ ಅಭಿವೃದ್ಧಿ ಸಾಧ್ಯ ಪರ್ಕಳ ಸಂಘದಲ್ಲಿ ಒಗಟ್ಟಿದೆ ಎಂದು ಶ್ಲಾಘಿಸಿದರು.

ಎಲ್ಲರ ಆಶಯದಂತೆ ನನಸಾದ ಕನಸು: ಅನಿಲ್ ಕುಮಾರ್ ಮೇಲ್ಮನೆ ಹೆರ್ಗ

ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್ ಮೇಲ್ಮನೆ ಹೆರ್ಗ ಮಾತನಾಡಿ, ಎಲ್ಲರ ಮನಸ್ಸಲ್ಲಿ ಸಮಾಜಕ್ಕೊಂದು ಸಂಘ ಬೇಕು ಎನ್ನುವ ಕನಸು ಇದ್ದದ್ದರಿಂದ ಸಂಘ ಇವತ್ತು ಬಲಿಷ್ಠವಾಗಿದೆ. ಸಮಾಜಕ್ಕೆ ಒಳ್ಳೆಯದಾಗಬೇಕಾದರೆ ಸಂಘಟನೆ ಬೇಕು. ಸಂಘಟನೆಗೆ ಬೇಕಾದ ವ್ಯವಸ್ಥೆಗಳನ್ನು ಹಿರಿಯರು, ದಾನಿಗಳು, ಸಮಾಜದ ಜನರು ನೀಡಿದ್ದಾರೆ. ಎಲ್ಲರೂ ಸೇರಿ ಈ ನವೀಕೃತ ಸಭಾಂಗಣದ ಕನಸನ್ನು ಸಾಕಾರಗೊಳಿಸಿದ್ದಾರೆ. ಎಲ್ಲರೂ ತೆರೆಯ ಹಿಂದೆ ಸೇವೆ ಮಾಡಿದ್ದರಿಂದಲೇ ಸಮಾಜಕ್ಕೆ ಈ ಆಡಿಟೋರಿಯಂ ಲೋಕಾರ್ಪಣೆಯಾಯಿತು. ಮುಂದೆಯೂ ಸಂಘದ‌ ಸಮಾಜಮುಖಿ ಯೋಜನೆಗಳಿಗೆ ಸಮಾಜದ ಜನರು ಜೊತೆಯಾಗಬೇಕು ಯುವಜನರಿಗೆ ಸ್ವ ಉದ್ಯೋಗ ನೀಡುವ ಕಾರ್ಯಕ್ರಮಗಳನ್ನು ರೂಪಿಸಬೇಕು ಎನ್ನುವ ಯೋಜನೆ ಸಂಘಕ್ಕಿದೆ. ಇದರಿಂದ ಸಮಾಜದ ಯುವಜನರ ಏಳಿಗೆ ಸಾಧ್ಯ ಎಂದರು.

ರಾಷ್ಟ್ರೀಯ ಬಿಲ್ಲವ ಮಹಾಮಂಡಳದ ಅಧ್ಯಕ್ಷರಾದ, ಸೂರ್ಯಕಾಂತ್ ಜೆ ಸುವರ್ಣ ಮಾತನಾಡಿ, ಪರ್ಕಳ ಸಂಘ ಎಲ್ಲರಿಗೂ ಮಾದರಿ ಮತ್ತು ಹೆಮ್ಮೆ.ಇಷ್ಟು ಕಡಿಮೆ ಸಮಯದಲ್ಲಿ ದೊಡ್ಡ ಸಭಾಭವನ ನಿರ್ಮಿಸಿ ಸಮಾಜಕ್ಕೆ ಆದರ್ಶವಾಗಿದೆ ಎಂದರು.

80 ನೇ ಬಡಗಬೆಟ್ಟು ಗ್ರಾ.ಪಂ ಅಧ್ಯಕ್ಷ ಕೇಶನ್ ಕೋಟ್ಯಾನ್, ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಬ್ರಹ್ಮಶ್ರೀ ಸಂಘ ಪರ್ಕಳದ ಸ್ಥಾಪಕಾಧ್ಯಕ್ಷರಾದ ಸದಾನಂದ ಪರ್ಕಳ, ಬಿಲ್ಲವ ಸೇವಾ ಸಂಘ ಬನ್ನಂಜೆಯ ಅಧ್ಯಕ್ಷ ಶಶಿಧರ್ ಅಮೀನ್, ಉದ್ಯಮಿ ನಾರಾಯಣ ಪೂಜಾರಿ ಪರ್ಕಳ, ಬಬ್ಬುಸ್ವಾಮಿ ದೇವಸ್ಥಾನ ಅಧ್ಯಕ್ಷರಾದ ಶ್ರೀನಿವಾಸ ಪೂಜಾರಿ, ಮಾಜಿ ತಾ.ಪಂ ಅಧ್ಯಕ್ಷೆ ವಸಂತಿ ಸತೀಶ್ ಪೂಜಾರಿ, ಮಾಜಿ ನಗರ ಸಭಾ ಸದಸ್ಯೆ ಅಶ್ವಿನಿ ಅರುಣ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷರಾದ ದೇವಕಿ ಎಸ್ ಕೋಟ್ಯಾನ್, ಕಾರ್ಯದರ್ಶಿ ಸಂದ್ಯಾ ರಮೇಶ್ ಸುವರ್ಣ, ಕೋಶಾಧಿಕಾರಿ ಭಾಸ್ಕರ ಪೂಜಾರಿ, ಗೌರವಾಧ್ಯಕ್ಷರಾದ ದೇವು ಪೂಜಾರಿ ಮಣಿಪಾಲ ಉಪಸ್ಥಿತರಿದ್ದರು.

ರಮೇಶ್ ಸುವರ್ಣ ಸ್ವಾಗತಿಸಿದರು. ಲೋಕೇಶ್ ಅಮೀನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಚಿನ್ ಪೂಜಾರಿ ವಂದಿಸಿದರು. ರಚನಾ ಮನೋಹರ್, ಕೌಶಿಕ್ ಸುವರ್ಣ ನಿರೂಪಿಸಿದರು.