ಕಾರ್ಕಳ: ಕಾರ್ಕಳದಿಂದ ಉಡುಪಿಗೆ ಮತ್ತು ಹೆಬ್ರಿ ಶಿವಮೊಗ್ಗದತ್ತ ಸಂಚರಿಸುವ ಕೆಲವೊಂದು ಎಕ್ಸ್ ಪ್ರೆಸ್ ಬಸ್ ಗಳು ಬಸ್ಸು ನಿಲ್ದಾಣದಿಂದ ಮಾರ್ಕೆಟು ರಸ್ತೆಯಾಗಿ ಉಡುಪಿಗೆ ಸಂಚರಿಸುವ ಬದಲು ನಗರದ ಮುಖ್ಯ ರಸ್ತೆ ರಥಬೀದಿ ಮೂಲಕ ಸಂಚರಿಸಿ ಪ್ರತೀ ದಿನ ನಿಯಮವನ್ನು ಉಲ್ಲಂಘಿಸುತ್ತಿವೆ.
ಉಡುಪಿ, ಹೆಬ್ರಿ ಮಾರ್ಗದಲ್ಲಿ ಸಂಚರಿಸುವ ಬಸ್ ಗಳು ಕಾರ್ಕಳ ಮಾರ್ಕೆಟ್ ರಸ್ತೆಯ ಮೂಲಕ ಸಂಚರಿಸಿ, ಉಡುಪಿ,ಹೆಬ್ರಿಯಿಂದ ಮರಳಿ ಬರುವಾಗ ಮುಖ್ಯ ರಸ್ತೆಯ ಮೂಲಕ ಬಸ್ಸು ನಿಲ್ದಾಣಕ್ಕೆ ಬರಬೇಕು. ಆದರೆ ಹೆಚ್ಚಿನ ಬಸ್ಸುಗಳು ಉಡುಪಿಗೆ ಹೋಗುವಾಗಲೂ, ಬರುವಾಗಲೂ ಮುಖ್ಯ ರಸ್ತೆಯಲ್ಲೇ ಸಂಚರಿಸುವ ಮೂಲಕ ಮೊದಲೇ ಇಕ್ಕಟ್ಟಾಗಿರುವ ನಗರದ ರಸ್ತೆಗಳನ್ನು ಟ್ರಾಫಿಕ್ ಮೂಲಕ ಇನ್ನಷ್ಟು ಗೋಜಲಾಗಿಸಿವೆ.ಎರಡೂ ಕಡೆಗಳಿಂದ ಬಸ್ಸುಗಳು ಬರುವಾಗ ಪಾದಚಾರಿಗಳಿಗೆ ಮುಖ್ಯರಸ್ತೆಯಲ್ಲಿ ಸಂಚರಿಸುವುದೇ ಸವಾಲಾಗಿದೆ.ಪ್ರತೀ ದಿನವೂ ಜೀವ ಕೈಯಲ್ಲಿ ಹಿಡಿದು ನಡೆಯಬೇಕಾದ ಅಸಹಾಯಕತೆ ಕಾರ್ಕಳ ಜನತೆಯದ್ದು. ಟೈಮಿಂಗ್ ನೆಪ ಹೇಳಿ ಕೆಲವೊಂದು ಎಕ್ಸ್ ಪ್ರೆಸ್ ಬಸ್ಸುಗಳು ನಗರದ ಸಂಚಾರ ನಿಯಮಗಳನ್ನು ಪಾಲಿಸುತ್ತಿಲ್ಲ. ಉಡುಪಿ ಬಸ್ ಗಳಿಗಾಗಿ ಮಾರ್ಕೆಟು ರಸ್ತೆಯಲ್ಲಿ ಕಾಯುತ್ತ ನಿಲ್ಲುವ ಪ್ರಯಾಣಿಕರು ಕೆಲವು ಬಸ್ ಮಾರ್ಕೆಟ್ ರಸ್ತೆಗೆ ಬರದ ಕಾರಣದಿಂದ ಪರದಾಡುತ್ತಿದ್ದಾರೆ.ಅವರ ಸಮಯವೆಲ್ಲಾ ಬಸ್ ಗೋಸ್ಕರ ಕಾಯುದರಲ್ಲಿಯೇ ಕಳೆದುಹೋಗುತ್ತಿದೆ.
ಕಾರ್ಕಳ ಪೊಲೀಸ್ ಕಂಟ್ರೊಲ್ ವ್ಯವಸ್ಥೆ ಕೂಡ ಬಸ್ ಗಳ ನಿಯಮ ಉಲ್ಲಂಘನೆಯನ್ನು ಗಮನಿಸದೇ ಇರುವುದು ದುರಂತ.

















