ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ತಡಿಯಂಡಮೋಳ್ ಟ್ರೆಕ್ಕಿಂಗ್ಗೆ ತೆರಳಿದ್ದ ಕೇರಳ ಮೂಲದ ಯುವತಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಎರ್ನಾಕುಲಂನಲ್ಲಿ ಐಟಿ ಉದ್ಯೋಗಿಯಾಗಿರುವ, ಕೋಯಿಕ್ಕೋಡ್ ನಿವಾಸಿ 35 ವರ್ಷದ ಶರಣ್ಯಾ ಬೆಳಗ್ಗೆ ಸುಮಾರು 8.30ರ ವೇಳೆಗೆ ಅರಣ್ಯ ಇಲಾಖೆಯ ಚೆಕ್ಪೋಸ್ಟ್ಗೆ ಬಂದಿದ್ದರು. ಒಬ್ಬೊಬ್ಬರನ್ನೇ ಟ್ರೆಕ್ಕಿಂಗ್ಗೆ ಬಿಡದ ನಿಯಮದ ಹಿನ್ನೆಲೆಯಲ್ಲಿ, ಬೇರೊಂದು ಗುಂಪಿನೊಂದಿಗೆ ಕಳುಹಿಸಲಾಗಿತ್ತು.
“ದಾರಿ ತಪ್ಪಿದ್ದೇನೆ” ಎಂದು ಫೋನ್ ಕಟ್
ಸಾಮಾನ್ಯವಾಗಿ ಟ್ರೆಕ್ಕಿಂಗ್ಗೆ ತೆರಳಿದವರು ಮಧ್ಯಾಹ್ನ 1.30ರೊಳಗೆ ಚೆಕ್ಪೋಸ್ಟ್ಗೆ ಮರಳಬೇಕಿತ್ತು. ಆದರೆ ಶರಣ್ಯಾ ವಾಪಸ್ ಬರದ ಹಿನ್ನೆಲೆ, ಹೋಂಸ್ಟೇ ಮಾಲೀಕರು ಮೊದಲಿಗೆ ಕರೆ ಮಾಡಿದಾಗ ಫೋನ್ ಸಂಪರ್ಕವಾಗದೆ, ನಂತರ ಸಂಪರ್ಕವಾದಾಗ ಶರಣ್ಯಾ ತಾನು ದಾರಿ ತಪ್ಪಿದ್ದೇನೆ ಎಂದು ತಿಳಿಸಿದ್ದಾಳೆ. ಆ ನಂತರ ಫೋನ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಈ ವಿಷಯವನ್ನು ತಕ್ಷಣವೇ ಅರಣ್ಯ ಇಲಾಖೆಗೆ ತಿಳಿಸಲಾಗಿದ್ದು, ಸಿಬ್ಬಂದಿ ಮತ್ತು ಸ್ಥಳೀಯರು ಸಂಜೆ ಬೆಟ್ಟದಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಬಳಿಕ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯರು ಸೇರಿ ಮೂರು ದಿನಗಳಿಂದ ಶೋಧ ಕಾರ್ಯ ನಡೆಸುತ್ತಿದ್ದರೂ ಯುವತಿಯ ಸುಳಿವು ಸಿಕ್ಕಿಲ್ಲ. ANF (Anti Naxal Force) ತಂಡವೂ ಹುಡುಕಾಟ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಶರಣ್ಯಾಳಿಗಾಗಿ ತೀವ್ರ ಶೋಧ ಮುಂದುವರಿದಿದೆ.

















