ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ: ಇಂಡಕ್ಷನ್‌ ಸ್ಟವ್‌, ಪಾತ್ರೆ ಉತ್ಪಾದನೆ ಹೆಚ್ಚಳಕ್ಕೆ ಕೇಂದ್ರ ಚಿಂತನೆ

ನವದೆಹಲಿ, ಏ.4: ಕೊಲ್ಲಿ ಯುದ್ಧದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಡಕ್ಷನ್‌ ಸ್ಟವ್‌, ಅದಕ್ಕೆ ಪೂರಕವಾದ ಪಾತ್ರೆಗಳ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಗ್ಯಾಸ್‌ ಟ್ರಬಲ್‌ ಹಿನ್ನೆಲೆಯಲ್ಲಿ ದೇಶಾದ್ಯಂತ ಈ ರೀತಿಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಇರಾನ್‌ ಯುದ್ಧದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ವಿದ್ಯುತ್‌ ಆಧಾರಿತ ಇಂಡಕ್ಷನ್‌ ಸ್ಟವ್‌, ಅದಕ್ಕೆ ಪೂರಕವಾದ ಪಾತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ದೇಶದಲ್ಲಿ ಇಂಡಕ್ಷನ್‌ ಕುಕ್ಕರ್‌ಗಳು,ಕಿಟೆಲ್‌ಗಳು, ಪಾತ್ರೆಗಳ ಮಾರಾಟ ಹೆಚ್ಚಾಗಿದೆ. ಇದರ ನಡುವೆಯೇ ವಿದ್ಯುತ್‌ ಇಲಾಖೆ ಕಾರ್ಯದರ್ಶಿ ಪಂಕಜ್‌ ಅಗರ್ವಾಲ್‌ ಸೇರಿ ಹಿರಿಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಅವರು ಈ ವಿಚಾರವಾಗಿ ಚರ್ಚೆ ನಡೆಸಿದರು. ಇಂಡಕ್ಷನ್‌ ಕುಕ್ಕರ್‌ಗಳು ಹಾಗೂ ಅದಕ್ಕೆ ಪೂರಕವಾದ ಪಾತ್ರೆಗಳ ಉತ್ಪಾದನೆಯನ್ನು ಯಾವ ರೀತಿ ಹೆಚ್ಚಳ ಮಾಡಬಹುದು ಎಂಬ ಕುರಿತು ಸಮಾಲೋಚನೆ ನಡೆಸಿದರು.