ಉಡುಪಿ: ಮಾ.15ರಂದು ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾದಿಂದ ‘ಶಿವಾಜಿ ಸಂಗಮ’ ಕಾರ್ಯಕ್ರಮ

ಉಡುಪಿ: ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾದ ನೇತೃತ್ವದಲ್ಲಿ ಶಿವಾಜಿ ಸಂಗಮ ಕಾರ್ಯಕ್ರಮವನ್ನು ಮಾ.15ರಂದು ಸಂಜೆ 4.30ಕ್ಕೆ ಬಿಜೆಪಿ ಜಿಲ್ಲಾ ಕಚೇರಿಯ ಬಳಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ಅಧ್ಯಕ್ಷೆ ಸುಮಲತ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಸಹಿತ ಎಸ್.ಟಿ. ಸಮುದಾಯಕ್ಕೆ ಸರಕಾರದಿಂದ ದೊರಕಬಹುದಾದ ಸೌಲಭ್ಯಗಳನ್ನು ಪರಿಚಯಿಸುವ ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಜೀವನಾದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು‌ ಆಯೋಜಿಸಲಾಗಿದೆ.ಅಂದು ಸಂಜೆ 4.30ಕ್ಕೆ ಸುಮಾರು 10 ತಂಡಗಳಿಂದ ಮರಾಠಿ ಸಮುದಾಯದ ಭವ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ನೃತ್ಯ ವೈಭವ ನಡೆಯಲಿದೆ. ಸಂಜೆ ಗಂಟೆ 5.30ಕ್ಕೆ ನಡೆಯುವ ಶಿವಾಜಿ ಸಂಗಮ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಎ. ಸುವರ್ಣ ವಹಿಸಲಿದ್ದಾರೆ.

ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಸ್.ಟಿ. ಸಮುದಾಯದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಿದ್ದಾರೆ. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ. ಮರಾಠಿ ಸಮುದಾಯದ ಹತ್ತು ಸಮಸ್ತರ ಕಟ್ಟೆಯ 18 ಗುರಿಕಾರರಿಗೆ ಗೌರವಾರ್ಪಣೆ ನಡೆಯಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಉಡುಪಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎ.ಉಮೇಶ್ ನಾಯ್ಕ್, ಮಾಜಿ ನಗರಸಭಾ ಸದಸ್ಯ ಅಶೋಕ್ ನಾಯ್ಕ್ ಮತ್ತು ಸಮುದಾಯದ ಪ್ರಮುಖರು ಭಾಗವಹಿಸಲಿದ್ದಾರೆ. ಖ್ಯಾತ ವಾಗ್ಮಿ ಪ್ರಕಾಶ್ ಮಲ್ಪೆ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ರಾತ್ರಿ ಗಂಟೆ 7.30ರಿಂದ ವಿಜಯ ಕುಮಾರ್ ಕೋಡಿಯಾಲ್ ಬೈಲ್ ಅವರ ನಿರ್ದೇಶನದ ತುಳು ನಾಟಕ ಛತ್ರಪತಿ ಶಿವಾಜಿ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಉಡುಪಿ ನಗರ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸುಗುಣಾ ಡಿ. ನಾಯ್ಕ್, ವಿನಯ್, ಉಪಾಧ್ಯಕ್ಷರುಗಳಾದ ನವೀನ್ ನಾಯ್ಕ್, ಶರತ್ ನಾಯ್ಕ್ ಹಾಗೂ ರಾಹುಲ್ ಉಪಸ್ಥಿತರಿದ್ದರು.