ಉಡುಪಿ:ಗರ್ಭಕಂಠ ಕ್ಯಾನ್ಸರ್ ತಡೆಗೆ ಹೆಚ್.ಪಿ.ವಿ ಲಸಿಕಾ ಅಭಿಯಾನ ಪ್ರಮುಖ ಮೈಲಿಗಲ್ಲು – ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಆರೋಗ್ಯವಂತ ರಾಷ್ಟ್ರದ ಉದಯ ಆರೋಗ್ಯವಂತ ಮಹಿಳೆಯರಿಂದ ಆರಂಭವಾಗುತ್ತದೆ.ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಗರ್ಭಕಂಠ ಕ್ಯಾನ್ಸರ್ ತಡೆಗೆ ಹೆಚ್.ಪಿ.ವಿ ಲಸಿಕೆ ಸಹಕಾರಿಯಾಗಿದ್ದು, ಹೆಣ್ಣು ಮಕ್ಕಳಸದೃಢ ಆರೋಗ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಲಸಿಕಾ ಅಭಿಯಾನ ಕಾರ್ಯಕ್ರಮವು ಒಂದು ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಶುಕ್ರವಾರ ನಗರದ ಬ್ರಹ್ಮಗಿರಿ ಸೈಂಟ್ ಸಿಸಿಲಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಹೆಚ್.ಪಿ.ವಿ ಲಸಿಕಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಹ್ಯೂಮನ್ ಪ್ಯಾಪಿಲೋಮ ವೈರಸ್ ಗರ್ಭಕಂಠ ಸೇರಿದಂತೆ ಅನೇಕ ಮಾದರಿಯ ಕ್ಯಾನ್ಸರ್ ಹರಡಲು ಕಾರಣವಾಗುತ್ತದೆ.ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಹೆಚ್.ಪಿವಿ ಲಸಿಕಾಅಭಿಯಾನಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದ್ದು, ಪ್ರಸ್ತುತ ಈ ಲಸಿಕೆಯನ್ನು 14 ವರ್ಷ ತುಂಬಿದ ಹಾಗೂ 15 ವರ್ಷ ವಯಸ್ಸಿನಒಳಗಿನ ಹೆಣ್ಣು ಮಕ್ಕಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ ಆಸ್ಪತ್ರೆಗಳು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತವಾಗಿ ಲಸಿಕೆಯನ್ನು ನೀಡಲಾಗುವುದು ಎಂದ ಅವರು, ಲಸಿಕಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿ ನೀಡಿರುವುದಾಗಿ ತಿಳಿಸಿದರು.

ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ಹೆಚ್.ಪಿ.ವಿ ಲಸಿಕೆಯನ್ನು ದೇಶದಲ್ಲಿ 14 ವರ್ಷ ತುಂಬಿದ ಹಾಗೂ 15 ವರ್ಷ ವಯಸ್ಸಿನ 1ಕೋಟಿ 15 ಲಕ್ಷ ವಿದ್ಯಾರ್ಥಿನಿಯರಿಗೆ ನೀಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಸುಮಾರು 6,89,620 ಅರ್ಹರನ್ನು ಗುರುತಿಸಲಾಗಿದೆ. ಈಗಾಗಲೇ 2,54,000 ಲಸಿಕೆಗಳನ್ನು ಆಯಾಯ ಜಿಲ್ಲಾ ಕೇಂದ್ರಕ್ಕೆ ರವಾನಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು 11,274 ಮಕ್ಕಳನ್ನು ಗುರುತಿಸಲಾಗಿದ್ದು, 4150 ಲಸಿಕೆಗಳು ಈಗಾಗಲೇ ಸರಬರಾಜಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಲಸಿಕೆಗಳುಲಭ್ಯವಾಗಲಿದೆ ಎಂದರು.

ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠ ಕ್ಯಾನ್ಸರ್ ತಡೆಗೆ ಲಸಿಕೆಯೊಂದೆ ಸಹಕಾರಿಯಾಗಿದ್ದು, ಲಸಿಕೆ ಪಡೆದ ಅರ್ಹರು ಸುರಕ್ಷಿತರಾಗಿದ್ದಾರೆ, ಇದರಿಂದ ಯಾವುದೇ ಆರೋಗ್ಯದಲ್ಲಿ ವ್ಯತ್ಯಯ ಸಂಭವಿಸುವುದಿಲ್ಲ ಹಾಗೂ ಅಡ್ಡಪರಿಣಾಮಗಳಿಲ್ಲ ಎಂಬ ಬಗ್ಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೂ ಭೇಟಿ ನೀಡಿ, ಲಸಿಕೆ ಪಡೆಯುವದರಿಂದ ಆಗುವ ಪ್ರಯೋಜನದ ಕುರಿತು ಜನಸಾಮಾನ್ಯರಿಗೆ, ಸಮುದಾಯಗಳಲ್ಲಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಅರಿವು ಮೂಡಿಸುವುದರೊಂದಿಗೆ ಹದಿಹರೆಯ ಬಾಲಕಿಯರ ಆರೋಗ್ಯ ರಕ್ಷಣೆಯಲ್ಲಿ ಕೈಜೋಡಿಸಬೇಕು ಎಂದ ಅವರು, ಹೆಚ್.ಪಿ.ವಿ ಲಸಿಕೆ ಪಡೆದ ವಿದ್ಯಾರ್ಥಿನಿಯರುತಮ್ಮ ಸಹಪಾಠಿಗಳಿಗೂ ಸಹ ಲಸಿಕೆ ಪಡೆಯುವಂತೆ ಪ್ರೇರಿಸಬೇಕು ಎಂದರು.

ಹೆಣ್ಣು ಮಕ್ಕಳು ಆರೋಗ್ಯ ಪೂರ್ಣ ಬದುಕು ಸಾಗಿಸಲು ಪ್ರತಿಯೊಬ್ಬರೂ ಅವಕಾಶ ಮಾಡಿಕೊಡಬೇಕು. ಲಸಿಕಾ ಅಭಿಯಾನವುಅರ್ಥಪೂರ್ಣವಾಗಿ ಅರ್ಹರಿಗೆ ತಲುಪಲು ಪೂರಕ ವಾತಾವರಣ ರೂಪುಗೊಳ್ಳುವಂತೆ ನೋಡಿಕೊಳ್ಳಬೇಕು ಎಂದ ಅವರು, ಜಿಲ್ಲೆಯಪ್ರತೀ ತಾಲೂಕಿನಲ್ಲಿಯೂ ಲಸಿಕಾ ಕಾರ್ಯಕ್ರಮದ ಕುರಿತು ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಜಿ.ಎಸ್ ಚಂದ್ರಶೇಖರ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಹವ್ಯಾಸ, ಪೌಷ್ಠಿಕ ಆಹಾರ ಸೇವನೆ, ನಿಯಮಿತ ದೈಹಿಕ ಚಟುವಟಿಕೆ, ದೇಹದ ತೂಕದಲ್ಲಿಸಮತೋಲನ ಕಾಯ್ದುಕೊಂಡಲ್ಲಿ ಆರೋಗ್ಯಯುತ ಜೀವನ ನಡೆಸಬಹುದು. ಕ್ಯಾನ್ಸರ್ ಎನ್ನುವುದು ಮಾರಣಾಂತಿಕಕಾಯಿಲೆಯಲ್ಲ. ಕ್ಯಾನ್ಸರ್ ಸೇರಿದಂತೆ ಯಾವುದೇ ರೋಗಗಳ ಲಕ್ಷಣಗಳು ಕಂಡುಬಂದಲ್ಲಿ ಆರಂಭಿಕ ಹಂತದಲ್ಲಿ ಪತ್ತೆಹಚ್ಚಿ ಸೂಕ್ತಚಿಕಿತ್ಸೆ ಪಡೆದುಕೊಂಡಲ್ಲಿ ಗುಣಮುಖರಾಗಿ ಆರೋಗ್ಯವಂತ ಜೀವನ ನಡೆಸಬಹುದು ಎಂದ ಅವರು, ದೇಶದಾದ್ಯಂತಹಮ್ಮಿಕೊಂಡಿರುವ ಹೆಚ್.ಪಿ.ವಿ ಲಸಿಕಾ ಅಭಿಯಾನವು ಪ್ರತಿ ಅರ್ಹರ ಮನೆ ಬಾಗಿಲಿಗೂ ತಲುಪುವುದರೊಂದಿಗೆ ಅಭಿಯಾನವುಯಶಸ್ವಿವಾಗಲಿ ಎಂದು ಶುಭಹಾರೈಸಿದರು.

ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜ್ಯೋತ್ಸ್ಯ ಬಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಹೆಚ್.ಪಿ.ವಿ ಲಸಿಕಾಕರಣ ಕಾರ್ಯಕ್ರಮವನ್ನು ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಮಾರ್ಗಸೂಚಿ ಅನುಸಾರ ಆಯೋಜನೆ ಮಾಡಲಾಗುತ್ತಿದೆ. ಯೂ-ವಿನ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡ 14 ವರ್ಷ ತುಂಬಿದ ಹಾಗೂ 15 ವರ್ಷ ವಯಸ್ಸಿನ ಒಳಗಿನ ಹೆಣ್ಣು ಮಕ್ಕಳಿಗೆಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಲಸಿಕೆನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎಲ್ಲಮ್ಮ, ಜಿಲ್ಲಾಸರ್ಜನ್ ಡಾ. ಅಶೋಕ್ ಹೆಚ್, ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ, ಸೈಂಟ್ ಸಿಸಿಲಿ ವಿದ್ಯಾಸಂಸ್ಥೆಯ ಜಂಟಿಕಾರ್ಯದರ್ಶಿ ಸಿಸ್ಟರ್ ಪ್ರಿಯಾ ಮರೀಯಾ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸಂಸ್ಥೆಯ ಅಧ್ಯಾಪಕವೃಂದದವರು, ವಿದ್ಯಾರ್ಥಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ನಿರೂಪಿಸಿ, ಚಂದ್ರಕಲಾ ವಂದಿಸಿದರು.