ಉಡುಪಿ: ಕೊಲ್ಲಿ ರಾಷ್ಟ್ರದಲ್ಲಿ ಯುದ್ಧಭೀತಿಯಿಂದ ಉಂಟಾಗಿರುವ ಅನಿಲ ವ್ಯತ್ಯಯದಿಂದಾಗಿ ಹೊಟೇಲ್ ಮಾಲಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಎರಡು ದಿನಗಳೊಳಗೆ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಉಡುಪಿ ಜಿಲ್ಲಾ ಹೋಟೇಲ್ ಮಾಲಕರ ಸಂಘದ ವತಿಯಿಂದ ನಗರದ ಡಯಾನ ಹೋಟೇಲ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಾಣಿಜ್ಯ ಬಳಕೆಯ ಅನಿಲ ಅಲಭ್ಯತೆಯ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ, ಆಹಾರ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿದ್ದು, ಒಂದು ವಾರದೊಳಗೆ ಸಮಸ್ಯೆ ಪರಿಹಾರವಾಗಲಿದೆ ಎಂದಿದ್ದಾರೆ.
ಕೊಲ್ಲಿ ರಾರ್ಷ್ಟಗಳ ಯುದ್ಧದಿಂದಾಗಿ ಇಡೀ ಜಗತ್ತಿನಾದ್ಯಂತ ಉಂಟಾಗಿರುವ ತಾತ್ಕಾಲಿಕ ಸಮಸ್ಯೆಯಿದು. ಹಾಗಾಗಿ ಲಭ್ಯವಿರುವ ಅನಿಲವನು ಹೇಗೆ ವಿತರಿಸಬೇಕು. ಎನ್ನುವ ಬಗ್ಗೆ ಚಿಂತಿಸಬೇಕು. ಇದನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳದೇ ಸಮಸ್ಯೆ ಬಗೆಹರಿಸಿಕೊಳ್ಳುವ ಕಡೆ ಗಮನಹರಿಸುವ ಅಗತ್ಯತೆ ಇದೆ. ಒಂದು ವಾರದಲ್ಲಿ ಈ ಸಮಸ್ಯೆ ಪರಿಹಾರವಾಗಲಿದ್ದು, ಅಲ್ಲಿವರೆಗೆ ಲಭ್ಯವಿರುವ ಸಿಲಿಂಡರ್‌ಗಳ ವಿತರಣೆಗೆ ವಿಧಿಸಿರುವ ನಿಯಮವನ್ನು ಸಡಿಲಗೊಳಿಸಿ, ಹೊಟೇಲ್ ಮಾಲಕರಿಗೂ ಅನಿಲ ವಿತರಿಸಲು ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸುವುದಾಗಿ ಅವರು ಭರವಸೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ ಉಡುಪಿ ಪುತ್ರನ್ ಗ್ಯಾಸ್ ಮಾಲಕ ದಿನೇಶ್ ಪುತ್ರನ್ ಮಾತನಾಡಿ, ಸೋಮವಾರದಿಂದ (ಮಾರ್ಚ್ 9) ಡಿಸ್ಟಿಂಬ್ಯೂಟರ್‌ಗಳಿಗೆ ಗ್ಯಾಸ್ ಪೂರೈಕೆಯಾಗಿಲ್ಲ. ಲಭ್ಯವಿದ್ದ ಅನಿಲ ವಿತರಣೆಗೂ ನಿಯಮಗಳನ್ನು ತಂದಿದ್ದು, ಬಿಸಿಯೂಟದ ಶಾಲೆಗಳು, ಆಸ್ಪತ್ರೆಯ ಕ್ಯಾಂಟೀನ್ ಹಾಗೂ ಇಂದಿರಾ ಕ್ಯಾಂಟೀನ್‌ಗಳಿಗೆ ವಿತರಿಸಲು ತಿಳಿಸಿದ್ದಾರೆ. ಅಲ್ಲದೇ ಗೃಹ ಬಳಕೆ ಅನಿಲ ಬುಕ್ಕಿಂಗ್‌ಗೂ ಕೆಲವೊಂದು ನಿಯಮಗಳನ್ನು ತಂದಿದ್ದು, ಹೀಗಾಗಿ ಗೃಹಬಳಕೆಯ ಗ್ಯಾಸ್ ಗೂ ಪ್ಯಾನಿಕ್ ಬುಕ್ಕಿಂಗ್ ಪ್ರಾರಂಭವಾಗಿತ್ತು. ಗೃಹ ಬಳಕೆಯ ಗ್ಯಾಸ್ ವಿತರಣೆಯಲ್ಲಿ ಯಾವುದೇ ತೊಂದರೆಯಿಲ್ಲ. ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ ಎಂದರು.
ಸಭೆಯಲ್ಲಿ ಹೊಟೇಲ್ ಮಾಲಕ ಶಿವಪ್ರಸಾದ್ ಶೆಟ್ಟಿ ತಲ್ಲೂರು, ಉಡುಪಿ ಜಿಲ್ಲಾ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ನಾಗೇಶ್ ಭಟ್, ಲಕ್ಷಂಣ್ ಮೊದಲಾದವರು ಇದ್ದರು.

















