ವರದಿ : ದೀಪಕ್ ಕಾಮತ್ ಎಳ್ಳಾರೆ
ಅಜೆಕಾರು : ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಟಲಕಟ್ಟೆ ಹಾಗೂ ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಳ್ಳಾರೆ ಮತ್ತು ಚೆನ್ನಿಬೆಟ್ಟು ಗ್ರಾಮಗಳಿಗೆ ಇನ್ನೂ ಬಸ್ಸು ಸಂಚಾರದ ವ್ಯವಸ್ಥೆಯೇ ಆಗಿಲ್ಲ. ಇದರಿಂದಾಗಿ ಜನರು ನಿತ್ಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಎಳ್ಳಾರೆಯ ಸುತ್ತಮುತ್ತಲಿನ ಗ್ರಾಮಗಳಾದ ಕಡ್ತಲ ಕುಕ್ಕುಜೆ, ಮುನಿಯಾಲು, ಪಡುಕುಡೂರು, ಪೆರ್ಡೂರು ಗ್ರಾಮಗಳಿಗೆ ಬಸ್ಸು ವ್ಯವಸ್ಥೆ ಇದ್ದು, ಎಳ್ಳಾರೆ -ಚೆನ್ನಿಬೆಟ್ಟು ಭಾಗಕ್ಕೆ ಬಸ್ಸು ವ್ಯವಸ್ಥೆ ಇಲ್ಲದಿರುವುದು ನಿರಾಶಾದಾಯಕ ಸಂಗತಿಯಾಗಿದೆ. ಬಸ್ಸು ಬಿಡ್ತೇವೆಂದು “ರೈಲು”ಬಿಡ್ತಾನೇ ಇದ್ದಾರೆ ಜನಪ್ರತಿನಿಧಿಗಳು ಈವರೆಗೆ ಸಾರಿಗೆ ವ್ಯವಸ್ಥೆ ಬಗ್ಗೆ ಯೋಚನೆ ಮಾಡದಿರುವುದು ಸಾರ್ವಜನಿಕ ಸಂಚಾರಕ್ಕೆ ಸಂಕಷ್ಟವೊಡ್ಡಿದೆ.
ವಿದ್ಯಾರ್ಥಿ, ನೌಕರರ ಪರದಾಟ:
ಈ ಭಾಗಗಳಲ್ಲಿ ಕೇವಲ ಪ್ರಾಥಮಿಕ ಶಾಲೆಗಳಿದ್ದು ಪ್ರೌಢಶಾಲೆ, ಕಾಲೇಜು ವಿದ್ಯಾಭ್ಯಾಸಕ್ಕಾಗಿ ದೂರದ ಮುನಿಯಾಲು, ಕುಕ್ಕುಜೆ, ಪೆರ್ಡೂರು ಗ್ರಾಮಕ್ಕೆ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.
ಎಳ್ಳಾರೆ ಗ್ರಾಮದಲ್ಲಿ 20 ಊರುಗಳಿಗೆ ಸಂಬಂಧ ಪಟ್ಟಿರುವ 2ನೇ ವೈಕುಂಠ ಖ್ಯಾತಿಯ ಉಡುಪಿ ಜಿಲ್ಲೆಯಲ್ಲಿ ಸಂಪೂರ್ಣ ಶಿಲಾಮಯ ಗೊಂಡಿರುವ ಏಕೈಕ ದೇವಾಲಯ ಶ್ರೀಲಕ್ಷ್ಮೀಜನಾರ್ಧನ ದೇವಸ್ಥಾನವಿದ್ದು ಇಲ್ಲಿಗೆ ಬರುವ ಭಕ್ತಭಿಮಾನಿಗಳು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದೆ. ಹಾಗೂ ದಿನನಿತ್ಯ ನೌಕರರು, ಕಾರ್ಮಿಕರು ಕೆಲಸಕ್ಕೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲದೆ ಪೇಚಾಡುತ್ತಿದ್ದಾರೆ.
ಕಾರ್ಕಳ ಶಾಸಕರ ಅನುದಾನದಿಂದ ಎಳ್ಳಾರೆ ಗ್ರಾಮದ ಕೋಂಬೆ ಪರಿಸರದಲ್ಲಿ 75 ಲಕ್ಷ ವೆಚ್ಚದ ಸೇತುವೆ ನಿರ್ಮಾಣವಾಗಿದ್ದು ಸುತ್ತಿ ಬಳಸಿ ಶಿವಪುರಕ್ಕೆ ಹೋಗುವುದಕ್ಕಿಂತ ಸುಲಭವಾಗಿ ಈ ಸೇತುವೆ ಮುಖಾಂತರವಾಗಿ ಶಿವಪುರ ಗ್ರಾಮವನ್ನು ಸಂಪರ್ಕ ಮಾಡಬಹುದು. ಆದರೆ ಬಸ್ಸು ವ್ಯವಸ್ಥೆ ಇಲ್ಲದಿರುವುದು ಈ ಭಾಗದ ವಿಪರ್ಯಾಸ.
ಹುಸಿಯಾದ ಭರವಸೆ:ಈ ಭಾಗದ ಜನಪ್ರತಿನಿದಿನಗಳು ಸೇರಿಕೊಂಡು ಆಗಿನ ಸಾರಿಗೆ ಸಚಿವರಾದ ಗೋಪಾಲ ಪೂಜಾರಿಯವರಲ್ಲಿ ಬಸ್ಸು ವ್ಯವಸ್ಥೆಗೆ ಮನವಿ ಸಲ್ಲಿಸಿದ್ದರು. ಅವರು ಆದಷ್ಟು ಬೇಗ ಬಸ್ಸು ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಈ ಭರವಸೆ ಈಗ ಹುಸಿಯಾಗಿದೆ.ಬಸ್ಸು ಸಂಚಾರದಿಂದ ಅಭಿವೃದ್ದಿ:ಎಳ್ಳಾರೆ ಗ್ರಾಮಕ್ಕೆ ಬಸ್ಸು ಸಂಚಾರ ಪ್ರಾರಂಭವಾದರೆ ಚೆನ್ನಿಬೆಟ್ಟು, ಚಟ್ಕಲ್ಪಾದೆ, ಕುಂಟಲಕಟ್ಟೆ, ಗ್ರಾಮಗಳು ಅಭಿವೃದ್ಧಿ ಗೊಳ್ಳುತ್ತದೆ. ಹಾಗೂ ಈ ಭಾಗದ ಸುಮಾರು ಹತ್ತು ಸಾವಿರ ಜನತೆಗೆ ಅನುಕೂಲವಾಗುತ್ತದೆ.
—————————— ———————————————————–
ಯಾರು ಏನಂತಾರೆ?
ಮೇಲಧಿಕಾರಿಗಳೊಂದಿಗೆ ಚರ್ಚೆ
ಈ ಭಾಗಕ್ಕೆ ಬಸ್ಸುವ್ಯವಸ್ಥೆ ಕಲ್ಪಿಸುವಂತೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಜನರಿಗೆ ಸಹಕಾರ ಮಾಡಲಾಗುವುದು.
-ಅರುಣ್ ಕುಮಾರ್ ಹೆಗ್ಡೆ
ಅಧ್ಯಕ್ಷರು, ಕಡ್ತಲ ಗ್ರಾಮ ಪಂಚಾಯತ್
—————————————————————————————-
ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ
ಆದಷ್ಟು ಬೇಗ ನಾನು ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಕ್ರಮ ಕೈಗೊಳ್ಳುವೆ
–ಸುಲತಾ ನಾಯ್ಕ್
ತಾಲೂಕು ಪಂಚಾಯತ್ ಸದಸ್ಯೆ
—————————————————————————————–
ಬಸ್ ಸಂಪರ್ಕಕ್ಕೆ ಪ್ರಯತ್ನ
ಪೆರ್ಡೂರು ಎಳ್ಳಾರೆ ಮಾರ್ಗವಾಗಿ ಮುನಿಯಾಲು ಮುಟ್ಲುಪಾಡಿಗೆ ಬಸ್ಸು ವ್ಯವಸ್ಥೆ ಕಲ್ಪಿಸುವಂತೆ ಈಗಾಗಲೇ ಸಾರಿಗೆ ಇಲಾಖೆಗೆ ಮನವಿ ಮಾಡಿದ್ದೇನೆ. ಹಾಗೂ ಜಿಲ್ಲಾಪಂಚಾಯತ್ ಸಭೆಯಲ್ಲಿ ಕೂಡ ಪ್ರಸ್ತಾವನೆ ಮಾಡಿದ್ದು ಎಳ್ಳಾರೆ ಭಾಗಕ್ಕೆ ಬಸ್ಸು ಕಲ್ಪಿಸುವಂತೆ ನಿರಂತರ ಪ್ರಯತ್ನ ಮಾಡುವೆನು.
–ಜ್ಯೋತಿ ಹರೀಶ್
ಸದಸ್ಯರು ಜಿಲ್ಲಾ ಪಂಚಾಯತ್, ಹೆಬ್ರಿ ಕ್ಷೇತ್ರ