ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನೆಲೆಗೊಂಡಿರುವ ಮುನಿಯಾಲು ಸಂಜೀವಿನಿ ಗೋಧಾಮವು ಕೃಷಿ, ಪ್ರಕೃತಿ ಮತ್ತು ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಸಮನ್ವಯಗೊಳಿಸಿದ ವಿಶಿಷ್ಟ ಕೇಂದ್ರವಾಗಿ ರೂಪುಗೊಂಡಿದೆ. ಪುರಾತನ ಶೈಲಿಗೆ ಆಧುನಿಕ ಸ್ಪರ್ಶ ನೀಡಿ ನಿರ್ಮಿಸಲಾದ ಈ ಗೋಧಾಮವು ಭಾರತೀಯ ಗೋತಳಿಗಳ ಸಂರಕ್ಷಣೆ, ಪಾರಂಪರಿಕ ಕೃಷಿ ವಿಧಾನಗಳ ಪುನರುಜ್ಜೀವನ ಮತ್ತು ಯುವ ಸಮುದಾಯವನ್ನು ಕೃಷಿಯತ್ತ ಆಕರ್ಷಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. “ಪ್ರಕೃತಿಯಿಂದ ಪ್ರಕೃತಿಗೆ” ಎಂಬ ವಿನೂತನ ಪರಿಕಲ್ಪನೆಯೊಂದಿಗೆ ಗೋಧಾಮವು ಕೃಷಿ ಆಸಕ್ತರನ್ನಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿಯೂ ಗಮನ ಸೆಳೆಯುತ್ತಿದೆ.
ಫೆಬ್ರವರಿ 19ರಿಂದ 21ರವರೆಗೆ ಶ್ರೀಮನ್ನಾಗಮಂಡಲ
ಗೋಧಾಮದಲ್ಲಿ ಫೆಬ್ರವರಿ 19ರಿಂದ 21ರವರೆಗೆ ಪಾರಂಪರಿಕ ದೊಂದಿ ಬೆಳಕಿನಲ್ಲಿ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲ ನಡೆಯಲಿದೆ. ರಾಸಾಯನಿಕರಹಿತ ಬಣ್ಣಗಳಿಂದ ನಾಗಮಂಡಲ ರಚನೆ, ದೀಪಗಳ ಅಲಂಕಾರ, ಶಬ್ದಮಾಲಿನ್ಯ ರಹಿತ ವಾದ್ಯಸಂಗೀತ—ಇವೆಲ್ಲವು ಪ್ರಕೃತಿಗೆ ಹತ್ತಿರವಾಗಿರುವ ಆಚರಣೆಯ ವಿಶೇಷತೆಗಳು.
“ರೈತಪೀಠ” ಪ್ರಶಸ್ತಿ ಪ್ರದಾನ:
240ಕ್ಕೂ ಹೆಚ್ಚು ಭಾರತೀಯ ಭತ್ತದ ತಳಿಗಳನ್ನು ಸಂರಕ್ಷಿಸಿದ ಅಪರೂಪದ ಕೃಷಿಕ ಋಷಿ ಬಿ.ಕೆ. ದೇವರಾಯ ಅವರಿಗೆ ಮೂಡಬಿದರೆಯ ಎಸ್ ಕೆಎಫ್ ಸಂಸ್ಥೆ ನೀಡುವ ಪ್ರಥಮ “ರೈತಪೀಠ” ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ರೈತರ ತ್ಯಾಗ, ಪರಿಶ್ರಮ ಮತ್ತು ಮಹತ್ವವನ್ನು ಗುರುತಿಸಿ ಗೌರವಿಸುವ ಮಹತ್ವಾಕಾಂಕ್ಷೆಯೊಂದಿಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
,ಗೋಧಾಮದ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್ ಅವರು ರೈತರು ಕಾರ್ಪೊರೇಟ್ ಮಟ್ಟಕ್ಕೆ ಬೆಳೆಯಬೇಕು ಎಂಬ ದೃಢಸಂಕಲ್ಪದೊಂದಿಗೆ ರೈತಪೀಠವನ್ನು ರೂಪಿಸಿದ್ದಾರೆ. ನಾಗದೇವರ ಆಶೀರ್ವಾದದ ಸಾನ್ನಿಧ್ಯದಲ್ಲಿ ಈ ಗೌರವ ಪ್ರದಾನವಾಗುವುದು ವಿಶೇಷ.
ಪ್ರಕೃತಿ ಸಂರಕ್ಷಣೆಯ ಸಂದೇಶ
ಸನಾತನ ಸಂಸ್ಕೃತಿಯ ಮೂಲಭೂತ ತತ್ವವಾದ ಪಂಚಭೂತಗಳ ಸಂರಕ್ಷಣೆಯ ಸಂದೇಶವನ್ನು ನಾಗಮಂಡಲದ ಮೂಲಕ ಸಾರಲಾಗುತ್ತದೆ.
ರಾಸಾಯನಿಕ ರಹಿತ ಬಣ್ಣಗಳ ಬಳಕೆ
ದೊಂದಿ ಮತ್ತು ತೈಲದ ದೀಪಗಳ ಅಲಂಕಾರ
ಉಡಿಕೆ, ಶಂಖ, ತಾಳ, ನಾಗಸ್ವರಗಳ ಮೃದು ನಾದ
5,000 ಬೀಜದುಂಡೆಗಳ ವಿತರಣೆ
1,000 ಅಡಿಕೆ ಸಸಿಗಳ ನೆಡುವ ಸಂಕಲ್ಪ
ಈ ಎಲ್ಲ ಕಾರ್ಯಕ್ರಮಗಳು ಪ್ರಕೃತಿ, ರೈತ ಮತ್ತು ಸಂಸ್ಕೃತಿಯ ಸಮಗ್ರ ಗೌರವವನ್ನು ಪ್ರತಿಬಿಂಬಿಸುತ್ತವೆ.
ಸಮಗ್ರ ಕೃಷಿ ಮಾದರಿ:
ಮುನಿಯಾಲು ಗೋಧಾಮವು ಕೃಷಿ ಪ್ರಯೋಗಶಾಲೆಯಂತಿದೆ. ಕೃಷಿ, ಜೇನು ಸಾಕಾಣಿಕೆ, ಹೈನುಗಾರಿಕೆ, ಮೀನು ಸಾಕಾಣಿಕೆ, ಕೋಳಿ, ಕುರಿ, ಕುದುರೆ ಸಾಕಾಣಿಕೆ ಸೇರಿದಂತೆ ಸಮಗ್ರ ಕೃಷಿ ಮಾದರಿಯನ್ನು ಇಲ್ಲಿ ಅನುಸರಿಸಲಾಗುತ್ತಿದೆ. ಯುವಜನರಿಗೆ ಕೃಷಿ ಬದುಕಿನ ಸಾಧ್ಯತೆಗಳನ್ನು ಪರಿಚಯಿಸುವುದು ಮುಖ್ಯ ಉದ್ದೇಶವಾಗಿದೆ.
ಕೃತಿ ಬಿಡುಗಡೆ:
ಗೋಧಾಮದ ಸಾಧನೆಯನ್ನು ದಾಖಲಿಸಿದ ಡಾ. ನರೇಂದ್ರ ರೈ ದೆರ್ಲ ರಚಿಸಿರುವ “ರೈತಪೀಠ ಇದು ಈ ನೆಲದ ಜ್ಞಾನಪೀಠ” ಕೃತಿ ಬಿಡುಗಡೆ ನಡೆಯಲಿದೆ.

















