ಉಡುಪಿ: ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಶ್ರೀಕೃಷ್ಣ ಮಠದಲ್ಲಿ ಮಕರಸಂಕ್ರಾಂತಿ ಪ್ರಯುಕ್ತ ಬುಧವಾರ ಸಂಜೆ ಸಂಭ್ರಮದ ಬ್ರಹ್ಮರಥ ಸಹಿತ ಮೂರುತೇರು ಉತ್ಸವ ನಡೆಯಿತು.

ಆಚಾರ್ಯ ಮಧ್ವರು ಮಕರ ಸಂಕ್ರಮಣದಂದು ಶ್ರೀಕೃಷ್ಣನ ಪ್ರತಿಷ್ಠಾಪನೆ ನಡೆಸಿದರು ಎಂಬ ಐತಿಹ್ಯದ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಮಹಾಭಿಷೇಕ ಸಹಿತ ವಿಶೇಷ ಪೂಜೆಯನ್ನು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ನೆರವೇರಿಸಿದರು.

ಏಕಾದಶಿ ಹಿನ್ನೆಲೆಯಲ್ಲಿ ಪ್ರಸಾದ ಭೋಜನ ವ್ಯವಸ್ಥೆ ಇರಲಿಲ್ಲ.
ಸಂಜೆ ಪರ್ಯಾಯ ಪುತ್ತಿಗೆ ಶ್ರೀಪಾದರ ನೇತೃತ್ವದಲ್ಲಿ ಮುಹೂರ್ತ ನಡೆದಿದ್ದು, ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾಗವಹಿಸಿದ್ದರು. ಭಾವಿ ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಮುಹೂರ್ತ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಕ್ತಿಭೃಂಗ ಸ್ವಾಮೀಜಿ ಭಾಗಿ:
1971ರಲ್ಲಿ ಇಸ್ಕಾನ್ನ ಪ್ರಭುಪಾದರಿಂದ ಪ್ರಭಾವಿತರಾದ ಭಕ್ತಿಭೃಂಗ ಶ್ರೀಗೋವಿಂದ ಸ್ವಾಮಿ ಮಹಾರಾಜ್ ವಿದೇಶದಿಂದ ಉಡುಪಿಗೆ ಆಗಮಿಸಿ, ರಥೋತ್ಸವದಲ್ಲಿ ಭಾಗಿಯಾದರು. ಅವರು ಖಜಕಿಸ್ತಾನ ಮುಂತಾದ ಇಸ್ಲಾಂ ರಾಷ್ಟ್ರಗಳಲ್ಲಿ ಕೃಷ್ಣ ಭಕ್ತಿ ಪ್ರಚಾರ ಮಾಡುತ್ತಿದ್ದಾರೆ.

ಇಂದು (ಜ.15) ಬೆಳಿಗ್ಗೆ 9ರಿಂದ ರಥಬೀದಿಯಲ್ಲಿ ಚೂರ್ಣೋತ್ಸವ ನಡೆಯಲಿದ್ದು ಮಧ್ಯಾಹ್ನ 12ರಿಂದ ಅನ್ನಸಂತರ್ಪಣೆ ಆರಂಭವಾಗಲಿದೆ. ಪರ್ಯಾಯ ಪುತ್ತಿಗೆ ಶ್ರೀಪಾದದ್ವಯರು ಮಕರ ಸಂಕ್ರಾಂತಿಯಂದು ಏಕಾದಶಿಯ ನಿರ್ಜಲ ಉಪವಾಸದಲ್ಲಿದ್ದು, ಮಾರನೆ ದಿನ ದ್ವಾದಶಿಯಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಆನಂತರ ಚೂರ್ಣೋತ್ಸವ ಆರಂಭವಾಗಲಿದೆ ಎಂದು ಶ್ರೀಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಅಂತಾರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.



















