ಉಡುಪಿ: ತುಳುಕೂಟ ಉಡುಪಿ ವತಿಯಿಂದ 24ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳುನಾಟಕ ಸ್ಪರ್ಧೆ ಇದೇ ಜ. 5ರಿಂದ 11 ರವರೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ ಎಂದು ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ಹವ್ಯಾಸಿ ನಾಟಕ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಬಾರಿ 7 ಪ್ರಸಿದ್ಧ ತಂಡಗಳಿಗೆ ಅವಕಾಶ ನೀಡಲಾಗಿದೆ ಎಂದರು.
ಜ. 5ರಂದು ಸಂಜೆ 5 ಗಂಟೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆಯಲ್ಲಿ, ವಿ.ಕೆ.ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷ ಕೆ.ಎಂ.ಶೆಟ್ಟಿ ಅವರು ನಾಟಕ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಬಳಿಕ ಕಲಾಮಂದಿರ ಉಡುಪಿ ತಂಡದಿಂದ ‘ಪಿಲಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಜ.6ರಂದು ರಂಗ ಮಿಲನ ಮುಂಬೈ ತಂಡದಿಂದ ‘ನಾಗ ಸಂಪಿಗೆ’, 7ರಂದು ಮದ್ದಡ್ಕ ಶ್ರೀವಿಷ್ಣು ಕಲಾವಿದೆರ್ ತಂಡದಿಂದ ‘ಕಾಶಿತೀರ್ಥ’, 8ರಂದು ಮಲ್ಪೆಯ ಕರಾವಳಿ ಕಲಾವಿದರಿಂದ ‘ಮುಗಿಯಂದಿ ಕಥೆ’, 9ರಂದು ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆಯಿಂದ ‘ನೆಲ ನೀರ್ದ ದುನಿಪು’, 10ರಂದು ಸುಮನಸಾ ಕೊಡವೂರು ತಂಡದಿಂದ ‘ಯೇಸ’ ಹಾಗೂ 11 ರಂದು ಮಣಿಪಾಲ ಸಂಗಮ ಕಲಾವಿದೆರ್ ತಂಡದಿಂದ ‘ಮಾಯೊಕದ ಮಣ್ಣಕರ’ ನಾಟಕ ಪ್ರದರ್ಶನಗೊಳ್ಳಲಿವೆ ಎಂದರು.
ವಿಜೇತ ತಂಡಗಳಿಗೆ ಪ್ರಥಮ 20,000 ರೂ., ದ್ವಿತೀಯ 15,000 ರೂ., ತೃತೀಯ 10,000 ನಗದು ಬಹುಮಾನದ ಜತೆಗೆ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ನಗದು ಬಹುಮಾನವಿದೆ. ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ 5,000 ರೂ., ಹೊರರಾಜ್ಯದ ತಂಡಗಳಿಗೆ 10,000 ರೂ. ಭತ್ಯೆಯೊಂದಿಗೆ ಅಗತ್ಯ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತುಳುಕೂಟದ ಉಪಾಧ್ಯಕ್ಷರಾದ ಭುವನ ಪ್ರಸಾದ್ ಹೆಗ್ಡೆ, ವಿ.ಕೆ.ಯಾದವ್, ಕಾರ್ಯದರ್ಶಿ ಗಂಗಾಧರ ಕಿದಿಯೂರು, ನಾಟಕ ಪರ್ಬದ ಸಂಚಾಲಕ ಪ್ರಭಾಕರ ಭಂಡಾರಿ ಇದ್ದರು.

















