ಶಿವಮೊಗ್ಗ: ಯುವಕನೊಬ್ಬನನ್ನು ಆತನ ಮಾವ ಮತ್ತು ಸಂಬಂಧಿಕರೇ ಸೇರಿ ರಾಡ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗದ ವಿನೋಬ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಸಮೀಪ ನಡೆದಿದೆ.
ಬರ್ಬರವಾಗಿ ಹತ್ಯೆಯಾಗಿರುವ ಯುವಕನನ್ನು ಅರುಣ್ ಎಂದು ಗುರುತಿಸಿದೆ.
ಮೃತ ಅರುಣ್ ಮತ್ತು ಯಶಸ್ವಿನಿ ಎಂಬುವವರು ಪರಸ್ಪರ ಪ್ರೀತಿಸಿ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಬ್ಬರಿಗೂ ಒಂದು ಮಗು ಕೂಡ ಇದೆ. ಕೂಲಿ ಕೆಲಸ ಮಾಡುತ್ತಿದ್ದ ಅರುಣ್ ಆರಂಭದಲ್ಲಿ ಚೆನ್ನಾಗಿದ್ದರೂ, ದಿನಕಳೆದಂತೆ ಗಾಂಜಾ ಮತ್ತು ಮದ್ಯಪಾನವನ್ನ ಹೆಚ್ಚಾಗಿ ಮಾಡುತ್ತಿದ್ದ ಎನ್ನಲಾಗಿದೆ. ಈ ಚಟದ ಬೆನ್ನಲ್ಲೇ ಪತ್ನಿ ಯಶಸ್ವಿನಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದ.
ಪತ್ನಿಯ ಕುಟುಂಬಕ್ಕೆ ಬೆದರಿಕೆ:
ಪತಿಯ ದೌರ್ಜನ್ಯ ತಾಳಲಾರದೆ ಯಶಸ್ವಿನಿ ಕಳೆದ ಮೂರು ತಿಂಗಳಿನಿಂದ ಮಗುವಿನೊಂದಿಗೆ ತವರು ಮನೆಯಲ್ಲಿ ಆಶ್ರಯ ಪಡೆದಿದ್ದರು. ಆದರೆ ಅರುಣ್ ಅಲ್ಲಿಗೂ ಬಿಡದೆ, ಪತ್ನಿಯ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ನಿಮ್ಮ ಇಡೀ ಕುಟುಂಬವನ್ನೇ ಟಾರ್ಗೆಟ್ ಮಾಡಿ ಮುಗಿಸುತ್ತೇನೆ ಎಂಬ ಅರುಣ್ ಬೆದರಿಕೆ ಹಾಕುತ್ತಿದ್ದ ಇದರಿಂದ ಪತ್ನಿ ಯಶಸ್ವಿನಿ ಮನೆಯವರು ಭಯಭೀಯತರಾಗಿದ್ದರು.
ಬುಧವಾರ ರಾತ್ರಿ ಅರುಣ್ ವೈನ್ ಶಾಪ್ ಮುಂದೆ ನಿಂತಿದ್ದಾಗ, ಬೈಕ್‌ನಲ್ಲಿ ಬಂದ ಮಾವ ತಿಪ್ಪೇಶ್ ಮತ್ತು ಹೆಂಡತಿಯ ಸೋದರ ಮಾವ ಲೋಕೇಶ್ ಏಕಾಏಕಿ ದಾಳಿ ನಡೆಸಿದ್ದಾರೆ. ಕೈಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ಅರುಣ್‌ನ ತಲೆಗೆ ಬಲವಾಗಿ ಹೊಡೆದಿದ್ದಾರೆ. ಹೊಡೆತದ ತೀವ್ರತೆಗೆ ಅರುಣ್ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ವಿನೋಬ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದ ಹತ್ಯೆ ಎಂದು ದೃಢಪಟ್ಟಿದೆ.
ಮಗಳಿಗೆ ದೈಹಿಕವಾಗಿ ಅಲ್ಲದೆ ಮಾನಸಿಕವಾಘಿಯೂ ತೀವ್ರವಾಗಿ ಕಿರುಕುಳ ನೀಡಿ, ಹಿಂಸಿಸುತ್ತಿದ್ದ. ಇದನ್ನ ತಾಳಲಾಗದೇ ತವರು ಮನೆಗೆ ಬಂದಿದ್ದರೂ ಅಲ್ಲೂ ಬಿಡದೇ ಅಳಿಯ ಕಾಟಕೊಡುತ್ತಿದ್ದ. ಜೊತೆಗೆ ಇಡೀ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದ ಅಳಿಯನ ಕಾಟ ಸಹಿಸಲಾಗದೇ ಮಾವ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

















