ಉಡುಪಿ:ವಿಕಲಚೇತನರ ಬಸ್ ಪಾಸ್ ನವೀಕರಣ

ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಸಕಾಲ ಸಂಬಂಧಿತ ಸೇವೆಯಾದ ವಿಕಲಚೇತನರ ರಿಯಾಯಿತಿ ಬಸ್ಸುಪಾಸನ್ನು ಸೇವಾಸಿಂಧು ಪೋರ್ಟಲ್ ಮುಖಾಂತರ ನಿರ್ವಹಿಸಲಾಗುತ್ತಿದ್ದು, ವಿಕಲಚೇತನರ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್ಸು ಪಾಸುಗಳನ್ನು ವಿತರಿಸಿರುತ್ತದೆ. 2025 ನೇ ಸಾಲಿನಲ್ಲಿ ವಿತರಿಸಿರುವ ಸದ್ರಿ ರಿಯಾಯಿತಿ ಬಸ್ಸು ಪಾಸುಗಳ ಅವಧಿಯು ಡಿಸೆಂಬರ್ 31 ಕ್ಕೆ ಮುಕ್ತಾಯಗೊಳ್ಳಲಿದ್ದು, 2026 ನೇ ಸಾಲಿಗಾಗಿ ಈ
ಬಸ್ಸು ಪಾಸುಗಳನ್ನು 2026 ರ ಜನವರಿ 01 ರಿಂದ ನವೀಕರಿಸಲು ಕ್ರಮಕೈಗೊಳ್ಳಲಾಗಿರುತ್ತದೆ ಹಾಗೂ ಹೊಸ ಪಾಸುಗಳನ್ನು ನೀಡಲಾಗುವುದು.

ವಿಕಲಚೇತನರ ರಿಯಾಯಿತಿ ಬಸ್ಸು ಪಾಸುಗಳನ್ನು ಫಲಾನುಭವಿಗಳು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ 2025 ನೇ ಸಾಲಿನಲ್ಲಿ ವಿತರಿಸಿದ ಪಾಸುಗಳನ್ನು 2026 ರ ಫೆಬ್ರವರಿ 28 ರ ವರೆಗೆ ಮಾನ್ಯ ಮಾಡಲಾಗುವುದು.

ವಿಕಲಚೇತನರ ರಿಯಾಯಿತಿ ಪಾಸುಗಳನ್ನು ಪಡೆಯಲು ಸೇವಾಸಿಂಧು ಪೋರ್ಟಲ್ ಮೂಲಕ https://sevasindhuservices.karnataka.gov.in ನಲ್ಲಿ ಅರ್ಜಿ ಸಲ್ಲಿಸುವ ಸಂಧರ್ಭದಲ್ಲಿ 1 ಸ್ಟ್ಯಾಂಪ್ ಸೈಜಿನ
ಮತ್ತು 2 ಪಾಸ್ ಪೋರ್ಟ್ ಸೈಜಿನ ಇತ್ತೀಚಿನ ಭಾವಚಿತ್ರ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿತರಿಸುವ
ಗುರುತಿನ ಚೀಟಿಯ ಮೂಲ ಪ್ರತಿಯನ್ನು (ಮಾನ್ಯತಾ ಅವಧಿ ಮುಗಿದಿರಬಾರದು) ಅಥವಾ ವಿಕಲಚೇತನ ವ್ಯಕ್ತಿಗಳಿಗೆ ಹೊಸದಾಗಿ ನೀಡಲಾಗಿರುವ ಯು.ಡಿ.ಐ.ಡಿ ಕಾರ್ಡ್ನ ಮೂಲಪ್ರತಿ ಹಾಗೂ ವಿಳಾಸದ ದೃಢೀಕರಣ ದಾಖಲಾತಿ (ಆಧಾರ್‌ಕಾರ್ಡ್) ಮೂಲಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ನಿಗಮದ ವಿಕಲಚೇತನರ ರಿಯಾಯಿತಿ ಬಸ್ಸುಪಾಸನ್ನು ಪಡೆಯುವ ಫಲಾನುಭವಿಗಳು ಮೇಲ್ಕಂಡ ಸೂಕ್ತ ದಾಖಲೆಗಳನ್ನು ಜೆ.ಪಿ.ಇ.ಜಿ ಹಾಗೂ ಪಿ.ಡಿ.ಎಫ್ ನಮೂನೆಯಲ್ಲಿ ಸೇವಾಸಿಂಧು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿ, ಸದರಿ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಹಾಗೂ ಪಾಸ್‌ನ ಶುಲ್ಕ 660/-ನ್ನು ನೀಡಿ ಪಾಸುಗಳನ್ನು ಪಡೆಯಬಹುದಾಗಿದೆ. ಸದರಿ ನವೀಕರಣ ಅರ್ಜಿದಾರರು ಈ ಹಿಂದೆ ವಿತರಿಸಿರುವ ಹಳೆಯ ಬಸ್ಸುಪಾಸನ್ನು ಕಡ್ಡಾಯವಾಗಿ ಹಿಂತಿರುಗಿಸಬೇಕು. ಪಾಸುಗಳನ್ನು ನವೀಕರಿಸಲು ಫೆ.28 ಕೊನೆಯ ದಿನವಾಗಿದ್ದು, ನಂತರ ಬಂದ ನವೀಕರಣದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮಂಗಳೂರು ಕ.ರಾ.ರ.ಸಾ.ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.